ಬೆಂಗಳೂರು, ಆ.18: ಕೌಶಲ್ಯವೇ ಪ್ರತಿಯೊಬ್ಬರ ಬದುಕಿನ ದೊಡ್ಡ ಆಸ್ತಿ. ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಯುವಕರು ತಮ್ಮ ಕೌಶಲ್ಯವನ್ನು ಬೆಳೆಸಿಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯ ಜೊತೆಗೆ ಕೌಶಲ್ಯವೂ ಅಗತ್ಯ. ಕೌಶಲ್ಯವಿದ್ದರೆ ಜೀವನದಲ್ಲಿ ಎಂತಹ ಸವಾಲನ್ನಾದರೂ ಎದುರಿಸಬಹುದು ಎಂದರು.
ಕರ್ನಾಟಕ ಇಂದು ತನ್ನ ಯುವಕರ ಕೌಶಲ್ಯ ಮತ್ತು ಪ್ರತಿಭೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕ್ಯಾಲಿಫೋರ್ನಿಯಾದಲ್ಲಿ ಸುಮಾರು 13 ಲಕ್ಷ ಐಟಿ ಎಂಜಿನಿಯರ್‌ಗಳಿದ್ದರೆ, ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಹೀಗಾಗಿ ಕರ್ನಾಟಕ ಕೌಶಲ್ಯದ ತವರೂರು ಎಂದು ಹೇಳಿದರು.ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಕೌಶಲ್ಯ ಇರುತ್ತದೆ. ಅಕ್ಕಸಾಲಿಗರು, ಮರಗೆಲಸ ಮಾಡುವವರು, ರೈತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಜನರು ತಮ್ಮ ಅನುಭವ ಮತ್ತು ಸಾಮರ್ಥ್ಯದಿಂದ ಅತ್ಯುತ್ತಮ ಕೆಲಸ ಮಾಡುತ್ತಾರೆ. ಇದಕ್ಕೆ ಯಾವುದೇ ಪದವಿ ಅಥವಾ ಪ್ರಮಾಣಪತ್ರದ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಟಾಟಾ, ಮಹೀಂದ್ರಾ ಸೇರಿದಂತೆ ಹಲವು ದೊಡ್ಡ ಉದ್ಯಮಗಳನ್ನು ಕಟ್ಟಿದವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ಇಲ್ಲಿನ ಕೌಶಲ್ಯವನ್ನು ಬಳಸಿಕೊಂಡು ತಮ್ಮ ಉದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿದ್ದಾರೆ. ಯುವಕರು ಬೆಳಗಾವಿ, ಹುಬ್ಬಳ್ಳಿ ಅಥವಾ ಧಾರವಾಡದಂತಹ ಸ್ಥಳೀಯ ಮಟ್ಟದ ಸ್ಪರ್ಧೆಗೆ ಸೀಮಿತವಾಗದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಗುರಿ ಹೊಂದಬೇಕು ಎಂದು ಮುಖ್ಯಮಂತ್ರಿ ಹೇಳಿದರು.ಸ್ವಾಮಿ ವಿವೇಕಾನಂದರು ಮತ್ತು ಜಮ್ಶೆಡ್‌ಜಿ ಟಾಟಾ ಅವರ ಚರ್ಚೆಯ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ಸಂಶೋಧನೆಯ ಮಹತ್ವವನ್ನು ಒತ್ತಿಹೇಳಿದ ಅವರು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಇಂದು ವಿಶ್ವದ ಪ್ರಮುಖ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಕರ್ನಾಟಕದ ಪ್ರತಿಭಾವಂತ ಯುವಕರು ವಿಶ್ವಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.

ತಮ್ಮ ಅಧಿಕಾರ ಒಂದು ದಿನ ಕೊನೆಗೊಳ್ಳಬಹುದು. ಆದರೆ ತಮ್ಮಲ್ಲಿರುವ ಕೌಶಲ್ಯ ಮತ್ತು ತಾವು ಪಡೆದಿರುವ ವಿದ್ಯೆ ಎಂದಿಗೂ ತಮ್ಮನ್ನು ಬಿಟ್ಟು ಹೋಗುವುದಿಲ್ಲ. ಪದವಿ ಇದ್ದ ಮಾತ್ರಕ್ಕೆ ಸಾಕಾಗುವುದಿಲ್ಲ; ಸಾಮಾನ್ಯ ಜ್ಞಾನ ಮತ್ತು ಕೌಶಲ್ಯವೂ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ವಿದ್ಯಾರ್ಥಿಗಳು ತಪ್ಪದೇ ಭಾಗವಹಿಸಬೇಕು. ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಖಾಸಗಿ ವಲಯದಲ್ಲಿನ ಉದ್ಯೋಗಾವಕಾಶಗಳ ಮಾಹಿತಿಯನ್ನು ಯುವಕರಿಗೆ ತಲುಪಿಸಲು ‘ಉದ್ಯೋಗ ಸೇತು’ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆಯ ಮೂಲಕ ಖಾಸಗಿ ಕಂಪನಿಗಳು ತಮ್ಮಲ್ಲಿರುವ ಉದ್ಯೋಗಾವಕಾಶಗಳ ಮಾಹಿತಿಯನ್ನು ಹಂಚಿಕೊಳ್ಳಲಿವೆ ಎಂದು ಮುಖ್ಯಮಂತ್ರಿ ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಚಪ್ಪಾಳೆಯೊಂದಿಗೆ ಶಿಳ್ಳೆ ಹೊಡೆದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಚಪ್ಪಾಳೆ ಹೊಡೆಯಿರಿ, ಆದರೆ ಶಿಳ್ಳೆ ಹೊಡೆಯಬೇಡಿ ಎಂದು ಮನವಿ ಮಾಡಿದರು.
ಶಿಸ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಬಹಳ ಮುಖ್ಯ. ಕಾರ್ಯಕ್ರಮದ ಘನತೆ ಕಾಪಾಡುವಂತೆ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು ಎಂದು ಅವರು ಸಲಹೆ ನೀಡಿದರು.









