ವಿಶೇಷ ವರದಿ :
ಸಿದ್ದೇಶ್. ಜಿ. ವೆಂಕಟಾಪುರ
ವರದಿಗಾರರು, ಮೊಳಕಾಲ್ಮೂರು
ಮೊ : 97409 64139
ಸುದ್ದಿಒನ್,
ಚರಿತ್ರೆಯ ಪುಟಗಳಲ್ಲಿ ಮಹತ್ವದ ಮೈಲುಗಲ್ಲು ಪಡೆದಿರುವ ಮೊಳಕಾಲ್ಮೂರು ದಕ್ಷಿಣ ಭಾರತದಲ್ಲಿ ಮೌರ್ಯರ ಹೆಗ್ಗುರುತಾದ ಅಶೋಕನ ಶಿಲಾಶಾಸನಗಳು ಮೊದಲ ಬಾರಿಗೆ ಕಂಡು ಬಂದದ್ದು ಈ ತಾಲೂಕಿನ ಬ್ರಹ್ಮಗಿರಿಯ ತಪ್ಪಲಿನಲ್ಲಿ. ಅಶೋಕ ಮಹಾಶಯನ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶ ಆ ಕಾಲಕ್ಕೆ ಸಮೃದ್ಧವಾಗಿತ್ತೇನೋ!
ಇತ್ತೀಚಿಗೆ ಈ ಕ್ಷೇತ್ರದ ಶಾಸಕರ ಒಂದು ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿಬಿಸಿಯಾದ ಚರ್ಚೆಯನ್ನು ಹುಟ್ಟು ಹಾಕಿದೆ. ಅಲ್ಲಿನ ಶಾಸಕರು ರಾಜಕೀಯ ಪ್ರಾತಿನಿಧ್ಯ ಮತ್ತು ಅಭಿವೃದ್ಧಿಯನ್ನು ಕುರಿತು ಮಾತನಾಡುವಾಗ ಆಡಿದ ಬಾಯಿ ತಪ್ಪಿನ ಮಾತುಗಳಿಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ಅದು ಮುಗಿದ ಇತಿಹಾಸ ಎನ್ನೋಣ. ಸಚಿವ ಸ್ಥಾನ ಇಂದು ಸಿಗದಿದ್ದರೆ ನಾಳೆ ಸಿಗಬಹುದು. ಸಿಕ್ಕಿದ್ದರೆ ಬಹು ದಿನಗಳ ಕನಸಿಗೆ ಸಾರ್ಥಕತೆಯ ಬರ ನೀಗುತ್ತಿತ್ತು. ಆದರೆ, ಅವರ ಕಳಕಳಿ ಮತ್ತು ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಹಾಗೂ ಪಕ್ಷಾತೀತವಾಗಿ ಗೌರವಿಸಬೇಕಿದೆ (ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎಂಬ ಹೇಳಿಕೆಯನ್ನಲ್ಲ). ಆ ವಿವಾದ ಏನೇ ಇರಲಿ ಅದನ್ನು ಹೊರತುಪಡಿಸಿ ಆದರೀಗ ನಾವು ಮಾತನಾಡಬೇಕಾಗಿರುವುದು ಅಭಿವೃದ್ಧಿ ಇತಿಹಾಸ ಕುರಿತು. ಆ ಕ್ಷೇತ್ರದ ಜನರ ಜೀವನಾಡಿಯ ಮಿಡಿತವೊಮ್ಮೆ ಕರ್ನಾಟಕದ ಮುಂದೆ ಚರ್ಚೆಗೆ ಕಾರಣವಾಗುತ್ತಿರುವುದು ಸುಸಂಗತವಾದುದು.
ಮೊಳಕಾಲ್ಮುರಿಗೆ ಒಂದು ಫ್ರೇಮ್ ಇದೆ. ಅದರೊಳಗೆ ಅನೇಕ ಸಂಗತಿಗಳು ಇಣುಕಿ ನೋಡುತ್ತವೆ. ಪುರಾಣ, ಇತಿಹಾಸ ಮತ್ತು ಸಾಂಸ್ಕೃತಿಕತೆಯ ಹೆಗ್ಗಳಿಕೆಯೂ ಇದೆ. ಆ ಊರು ಅಂದ್ರೇನೆ ತಟ್ಟನೆ ರೇಷ್ಮೆ ಸೀರೆ ಕಣ್ಣಿದುರಿಗೆ ಬಂದು ನಿಂತ್ಕೊಂಡು ಬಿಡುತ್ತದೆ. ನೇಯ್ಗೆಯಲ್ಲಿಯೇ ಚಿತ್ತಾರಗಳನ್ನು ಬರೆದು ಜಗತ್ತಿನ ಮುಂದೆ ತೆರೆದುಕೊಳ್ಳುವವರ ಬದುಕು ಹೇಗಿದೆ? ಕಲಾವಂತಿಕೆಯಲ್ಲಿ ಸುಂದರವಾಗಿ ಹೆಣೆಯುವ ಕೈಚಳಕದ ಕೈಗಳು ಸದೃಢವಾಗಿರಲಿ, ಬಿಡಲಿ. ಕುಶಲತೆಯುಳ್ಳ ನೈಪುಣ್ಯಕ್ಕೆ ಜಿಐ ಟ್ಯಾಗ್(53) ಸಿಕ್ಕಿದೆ. ಆದರೆ ಅವರ ಬದುಕಿನ ‘ಟ್ಯಾಗ್ ಲೈನ್’ ಮಾತ್ರ ಬದಲಾಗಿಲ್ಲ. ಅವರ ಸುಂದರ ಕೈಚಳಕಕ್ಕೆ ಸುಂದರ ಬದುಕಿದೆಯೇ? ಎನ್ನುವ ಪ್ರಶ್ನೆ ಅಂತೂ ಸದಾ ಕಾಡುತ್ತಿದೆ. ಬಹುದೊಡ್ಡ ಭರವಸೆಯಾದ ಭದ್ರಾ ಮೇಲ್ದಂಡೆ ಯೋಜನೆ ಇನ್ನೂ ಪೂರ್ಣ ಸಾಕಾರವಾಗಿಲ್ಲ. ನಿರೀಕ್ಷೆಯ ಕಣ್ಣುಗಳಲ್ಲಿ ಬರವೇ ಕಾಣಿಸುತ್ತಿದೆ.
ಡಿ ಎಂ ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಇದು ಒಂದು. ಇಂದಿಗೂ ಮಳೆಯಾಶ್ರಿತ ಬಯಲು ಭೂಮಿ. ವಲಸೆ ಮತ್ತು ದಿನಗೂಲಿ ಕಾರ್ಮಿಕರ ಜೀವನವೇ ಹೆಚ್ಚಾಗಿ ಕಾಣಿಸುತ್ತದೆ. ಯಾವುದೇ ನದಿ ನೀರಿನ ಸೌಕರ್ಯಗಳಿಲ್ಲ. ಕೈಗಾರಿಕೆಗಳಿಲ್ಲ. ಬರ ಬಂದರೆ ಅಲ್ಲಿನ ಜನಜೀವನ ಹೇಳಲಾಗದು. ದಿನನಿತ್ಯ ಸಾವಿರಾರು ಕಾರ್ಮಿಕರಿಗೆ ಸಮೀಪದ ಬಳ್ಳಾರಿಯೇ ಆಶ್ರಯವಾಗಿದೆ. ಆಡಳಿತಾತ್ಮಕವಾಗಿ ಚಿತ್ರದುರ್ಗ ತುಂಬಾ ದೂರ ಆಗುತ್ತದೆ. ಭೌಗೋಳಿಕವಾಗಿ ಬಳ್ಳಾರಿಯ ಸಾಂಸ್ಕೃತಿಕ ವಾತಾವರಣಕ್ಕೆ ಹೊಂದಿಕೆಯಾಗುತ್ತದೆ. ಎಲ್ಲಾ ವಿಧಾನಗಳಿಂದಲೂ ವಂಚಿತವಾಗಿರುವ ಈ ಕ್ಷೇತ್ರವನ್ನ 371 ಜೆಗೆ ಸೇರಿಸಬೇಕು ಎನ್ನುವ ಕೂಗು ನ್ಯಾಯಯುತವಾದದ್ದು. ಈಗಾಗಲೇ ಸಾಕಷ್ಟು ಬಾರಿ ಪ್ರಜ್ಞಾವಂತರು, ವಿದ್ಯಾವಂತರು, ಯುವಕರು, ಪತ್ರಕರ್ತರು ಅನೇಕ ಸಲ ಒತ್ತಾಯಿಸಿದ್ದಾರೆ. ಈ ಒತ್ತಾಯದ ಮರುಪರಿಶೀಲನೆಗೆ ಯೋಗ್ಯವಾದ ಸಮಯವೇ. ಸರ್ಕಾರ ಈ ಜನರ ಕೂಗಿಗೆ ಕಿವಿಗೊಡಬಹುದೆಂಬ ನಿರೀಕ್ಷೆ.
2011ರ ಜನಗಣತಿಯ ಪ್ರಕಾರ- 27,551 ಕುಟುಂಬಗಳನ್ನು ಹೊಂದಿದ್ದು, 1,41,284 ಒಟ್ಟು ಜನಸಂಖ್ಯೆ ಇದೆ. ಇದರಲ್ಲಿ ಪರಿಶಿಷ್ಟ ಪಂಗಡ (ST) ಜನಸಂಖ್ಯೆ 52,908 (ಒಟ್ಟು ಜನಸಂಖ್ಯೆಯ 37.45%) ಪರಿಶಿಷ್ಟ ಜಾತಿ (SC) ಜನಸಂಖ್ಯೆ 27,951 (ಒಟ್ಟು ಜನಸಂಖ್ಯೆಯ 19.78%) ಅಂದರೆ ಶೇಕಡ 57.23% ರಷ್ಟು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರು ಇದ್ದಾರೆ. ಕೆಲಸಗಾರರ ಪ್ರಮಾಣ (Work Participation) 71,486 (50.60%) ಇದು ಅಲ್ಲಿನ ಜನಜೀವನದ ಕೈಗನ್ನಡಿ. ರಾಜಕೀಯವಾಗಿ ಕಾಂಗ್ರೆಸ್ಸಿನ ಭದ್ರಕೋಟೆ. 1952ರಿಂದ 2023ರ ವರೆಗಿನ ಸು 19 ಬಾರಿ ವಿಧಾನಸಭೆ ಫಲಿತಾಂಶಗಳಲ್ಲಿ 13 ಬಾರಿ ಕಾಂಗ್ರೆಸ್ ಗೆದ್ದಿದೆ. ಈಗಿರುವ ಶಾಸಕರು ಐದು ಬಾರಿ ಗೆದ್ದಿದ್ದಾರೆ. 1957ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಎಸ್. ನಿಜಲಿಂಗಪ್ಪ ಅಂತಹವರು ಸ್ಪರ್ಧಿಸಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇದೊಂದು ಸಣ್ಣ ಕ್ಷೇತ್ರವಾದರೂ ರಾಜಕೀಯ ಇತಿಹಾಸದ ಮುತ್ಸದ್ದಿತನ ಇದೆ.
ಶಿಕ್ಷಣ ಕ್ಷೇತ್ರವು ಇಲ್ಲಿ ಅನೇಕ ಸವಾಲುಗಳಿಂದ ಕೂಡಿದೆ. ತಾಲೂಕಿನಲ್ಲಿ ಮಹಿಳಾ ಸಾಕ್ಷರತೆ ಶೇಕಡಾ 48ಕ್ಕಿಂತ ಕಡಿಮೆ ಇರುವುದು ಗಂಭೀರ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ಶಾಲೆಯಿಂದ ಹೊರಗುಳಿಯುವ (Dropout) ಪ್ರವೃತ್ತಿ ಇದಕ್ಕೆ ಮುಖ್ಯವಾದದ್ದು. ಅಲ್ಲದೆ ಋತುಮಾನದ ವಲಸೆಯೂ ಶಾಲಾ ತ್ಯಜಿಸುವಿಕೆ ಕಾರಣವಾಗಿದೆ. ಕುಟುಂಬಗಳ ಬಡತನ ಮತ್ತು ಕೃಷಿ ಆಧಾರಿತ ಋತುಮಾನದ ಗುಳೆ ಹೋಗುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪ್ರಮಾಣ ಹೆಚ್ಚಿದೆ. ಉನ್ನತ ಹಾಗೂ ತಾಂತ್ರಿಕ ಶಿಕ್ಷಣದ ಅಭಾವವಂತೂ ತಾಲೂಕನ್ನು ಪೀಡಿಸುತ್ತಿದೆ. ಸ್ನಾತಕೋತ್ತರ (PG) ಅಧ್ಯಯನ ಕೇಂದ್ರಗಳು, ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜುಗಳಿಲ್ಲದೆ ಇರುವುದರಿಂದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬಳ್ಳಾರಿ, ಚಿತ್ರದುರ್ಗ ಅಥವಾ ದಾವಣಗೆರೆ ನಗರಗಳನ್ನು ಅವಲಂಬಿಸಬೇಕಾಗಿದೆ. ಬೆಟ್ಟಗುಡ್ಡಗಳಿಂದ ಆವರಿಸಿರುವ ಈ ಕ್ಷೇತ್ರಕ್ಕೆ ಈ ಹೆಸರು ಬರಲು ‘ಮೊಳಗುವ ಕಲ್ಲುಗಳು ಇರುವುದರಿಂದಾಗಿ ಮೊಳಕಾಲ್ಮೂರು’ ಎಂದಾಗಿದೆ ಎನ್ನುವ ಅಭಿಪ್ರಾಯವೇನು ಸರಿ. ಮರುಗುವ ಜನರ ಅಭಿಪ್ರಾಯಗಳನ್ನು ಈಗ ಕೇಳಬೇಕಿದೆ. ಪರಿಶಿಷ್ಟರ ಮೀಸಲು ಕ್ಷೇತ್ರಕ್ಕೆ, ಅಭಿವೃದ್ಧಿಯ ಮೀಸಲು ಕೂಡ ಬೇಕಿದೆ. ಬಯಲು ಬಯಲಾಗಿಯೇ ಹೋದರೆ ಹೇಗೆ ?












