ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17 : ಉತ್ತರಾಖಂಡ ರಾಜ್ಯದ ಹಲ್ದವಾನಿಯ ರಾಮಲೀಲ ಮೈದಾನದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನರವರು ಭಾಷಣ ಮಾಡಿದ್ದಕ್ಕೆ ಶ್ರೀರಾಮಸೇನೆ ಪದಾಧಿಕಾರಿಗಳು ಶುದ್ದಿಕರಿಸಿರುವುದನ್ನು ಖಂಡಿಸಿ ಛಲವಾದಿ ಗುರುಪೀಠದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಬಲಪಂಥೀಯ ಶ್ರೀರಾಮಸೇನೆ ಪದಾಧಿಕಾರಿಗಳು ಮಲ್ಲಿಕಾರ್ಜುನ ಖರ್ಗೆರವರು ಭಾಷಣ ಮಾಡಿದ ಸ್ಥಳವನ್ನು ಗೋಮೂತ್ರ, ಸಗಣಿಯಿಂದ ಸ್ವಚ್ಚಗೊಳಿಸಿ ಅಸ್ಪøಶ್ಯತೆಯನ್ನು ಇನ್ನು ಜೀವಂತವಾಗಿರಿಸಿರುವುದು ಅತ್ಯಂತ ಅಮಾನವೀಯ. ಮಾನವ ಸಂಬಂಧವನ್ನು ಛಿದ್ರಗೊಳಿಸುವ ಹುನ್ನಾರವಿದು. ಇಂತಹ ಕೃತ್ಯವೆಸಗಿ ದಲಿತರಿಗೆ ಅವಮಾನ ಮಾಡಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವರನ್ನು ಆಗ್ರಹಿಸಿದರು.

ಛಲವಾದಿ ಸಮಾಜದ ಮಂಜುಳಮ್ಮ ಛಲವಾದಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆರವರು ದಲಿತರೆಂಬ ಕಾರಣಕ್ಕಾಗಿ ಶ್ರೀರಾಮ ಸೇನೆ ಪದಾಧಿಕಾರಿಗಳು ಕೀಳಾಗಿ ನೋಡುತ್ತಿರುವುದು ಯಾವ ನ್ಯಾಯ? ರಾಮ ಮಂದಿರದ ಹಣ ಲೂಟಿ ಹೊಡೆದವರನ್ನು ಶುದ್ದಗೊಳಿಸುವ ಬದಲು ಖರ್ಗೆರವರು ಭಾಷಣ ಮಾಡಿದ ಜಾಗವನ್ನು ಶುದ್ದಗೊಳಿಸುವ ಮೂಲಕ ಕ್ಷುಲ್ಲಕ ಕೆಲಸ ಮಾಡುತ್ತಿರುವುದು ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಛಲವಾದಿ ಸಮಾಜದ ಮುಖಂಡರುಗಳಾದ ವೈ.ತಿಪ್ಪೇಸ್ವಾಮಿ, ಹೆಚ್.ಶಿವಕುಮಾರ್, ಛಲವಾದಿ ನಿರಂಜನ ಚೀಳಂಗಿ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ರಾಮಕೃಷ್ಣ
ಟಿ.ನರಸಿಂಹಮೂರ್ತಿ, ಎನ್.ಮಲ್ಲೇಶ್, ಕುಶ, ವೀಣಗೌರಣ್ಣ, ಸಹನ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








