ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಆ. 17 : ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್. ವೈ. ಗೋಪಾಲಕೃಷ್ಣ ಅವರು ಮೊಳಕಾಲ್ಮೂರನ್ನು ಆಂಧ್ರಪ್ರದೇಶಕ್ಕೆ ಸೇರಿಸಬೇಕೆಂಬ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ, ಚಿತ್ರದುರ್ಗದ ಬಂಜಾರ ಲಂಬಾಣಿ ಸಮಾಜ ಹಾಗೂ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ವತಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿ ಈ ಸಂಬಂಧ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಸತೀಶ್ ಕುಮಾರ್, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನು ನೆರೆಯ ಆಂಧ್ರಪ್ರದೇಶಕ್ಕೆ ಸೇರಿಸಬೇಕು ಎಂಬ ಶಾಸಕ ಗೋಪಾಲಕೃಷ್ಣ ಅವರ ಹೇಳಿಕೆಯು ನಾಡು, ನುಡಿ ಹಾಗೂ ಜನತೆಗೆ ಬಗೆದ ದ್ರೋಹವಾಗಿದೆ ಐದಾರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಕನ್ನಡ ನಾಡು ಮತ್ತು ಭಾಷೆಯ ಕುರಿತು ಈ ರೀತಿಯ ಅವಮಾನಕಾರಿ ಹೇಳಿಕೆ ನೀಡಿರುವುದು ಸ್ಥಳೀಯ ಜನರಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ ಎಂದು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿ ಕೂಡಲೇ ರಾಜೀನಾಮೆಗೆ ಒತ್ತಾಯ: ಕನ್ನಡ ನೆಲ, ಜಲ ಹಾಗೂ ಭಾಷೆಯ ಮೇಲೆ ಗೌರವವಿಲ್ಲದ ಶಾಸಕರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಗಳು ತಕ್ಷಣವೇ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಲಾಯಿತು.
ಶಾಸಕರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡದಿದ್ದರೆ, ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಅಲ್ಲದೆ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ಸಭಾಧ್ಯಕ್ಷರು ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಗಡಿಭಾಗದ ಶಾಸಕರು ಭವಿಷ್ಯದಲ್ಲಿ ಇಂತಹ ನಾಡು-ನುಡಿ ವಿರೋಧಿ ಹೇಳಿಕೆಗಳನ್ನು ನೀಡದಂತೆ ಕೆಪಿಸಿಸಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ಶಾಸಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಮೊಳಕಾಲ್ಮೂರು ಕ್ಷೇತ್ರದ ಶಾಸಕರು ನಾಡಿನ ಹಿತಕ್ಕೆ ವಿರುದ್ಧವಾಗಿ ನೀಡಿರುವ ಹೇಳಿಕೆಯನ್ನು ಹಿಂಪಡೆದು ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ಸರ್ಕಾರ ಅವರ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಮತ್ತು ಅನರ್ಹತೆಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯ ಅಧ್ಯಕ್ಷ ಗಿರೀಶ್ ಡಿ.ಆರ್. ಅವರು ಎನ್.ವೈ. ಗೋಪಾಲಕೃಷ್ಣ ಅವರು ಆರು-ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅನುಭವಿ ರಾಜಕಾರಣಿಯಾಗಿದ್ದರೂ, ಕರ್ನಾಟಕದ ನಾಡು, ನುಡಿ ಮತ್ತು ಸಂಸ್ಕೃತಿಗೆ ಅಪಮಾನ ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಖಂಡನೀಯ.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಕೊರತೆಯಿದ್ದು, ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಗಡಿಭಾಗದ ಹಳ್ಳಿಗಳಲ್ಲಿ ಶಾಲೆ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶಾಸಕರು ಇಂತಹ ಸಮಸ್ಯೆಗಳಿಗೆ ಗಮನಹರಿಸಿ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಕ್ಷೇತ್ರವನ್ನು ಬೇರೆ ರಾಜ್ಯಕ್ಕೆ ಸೇರಿಸುವ ಕುರಿತು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಶಾಸಕರು ತಕ್ಷಣವೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು ಬೇಷರತ್ ಕ್ಷಮೆಯಾಚಿಸಬೇಕು. ಒಂದು ವಾರದೊಳಗೆ ಕ್ಷಮೆಯಾಚಿಸದಿದ್ದರೆ, ಬಂಜಾರ ಸಮಾಜ, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ಸೇರಿ “ಮೊಳಕಾಲ್ಮೂರು ಚಲೋ” ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಮುಖಂಡರುಗಳಾದ ಮಂಜುನಾಯ್ಕ್, ಚೇತನ್ ನಾಯ್ಕ್, ಹಾಲೇಶ್, ರವಿನಾಯ್ಕ್, ಯಶವಂತ, ಪರಮೇಶ್ ನಾಯ್ಕ್, ಶಿವನಾಯ್ಕ್, ರಮೇಶ್ ನಾಯ್ಕ್ ಉಪಸ್ಥಿತರಿದ್ದರು.












