Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಬಿಐ ತನಿಖೆ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ತಕ್ಷಣ ರಾಜೀನಾಮೆ ನೀಡಬೇಕು : ಚಿತ್ರದುರ್ಗದಲ್ಲಿ ಬಿಜೆಪಿ ಪ್ರತಿಭಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಆ. 17 : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅನುದಾನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ, ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಸಂಪುಟ ಪುನರ್ರಚನೆಯ ವೈಫಲ್ಯವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿವತಿಯಿಂದ ರಾಜ್ಯಾದ್ಯಂತ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಹಾಗೂ ಧರಣಿ ಮುಷ್ಕರ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲೂ ಸಹಾ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿಯನ್ನು ನಡೆಸಿತು.

ಈ ಪ್ರತಿಭಟನೆ ಹಾಗೂ ಧರಣಿ ಮುಷ್ಕರದಲ್ಲಿ ಬಿಜೆಪಿ ಮುಖಂಡರಾದ ರಘುಚಂದನ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭಿವೃದ್ಧಿ ಹಣವನ್ನು ರಾಜಕೀಯ ಹಾಗೂ ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಎದುರಿಸುತ್ತಿರುವ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರು ಅಧಿಕಾರದಲ್ಲಿ ಮುಂದುವರಿಯುವುದು ದುರದೃಷ್ಟಕರ ಹಾಗೂ ನೈತಿಕತೆಗೆ ವಿರೋಧವಾದದ್ದು ನೈತಿಕ ಹೊಣೆ ಹೊತ್ತು ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಪ್ರಸ್ತುತ ರಾಜಕಾರಣದಲ್ಲಿ ನೈತಿಕತೆ ಹಾಗೂ ಬದ್ಧತೆ ಕಣ್ಮರೆಯಾಗುತ್ತಿದ್ದು, ಸಾರ್ವಜನಿಕವಾಗಿ ಉತ್ತರದಾಯಿಯಾಗಿರಬೇಕಾದ ಜನಪ್ರತಿನಿಧಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ. ಟಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಚಿತ್ರದುರ್ಗ ನಗರ ಹಾಗೂ ಗ್ರಾಮಾಂತರ ಮಂಡಲಗಳಲ್ಲಿ ಈ ಕರೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಸತತ ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿ ಮನೆ ಮನೆಗೂ ತೆರಳಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.

ಈ ಪ್ರಸ್ತುತ ಸರ್ಕಾರದ ಆಯುಷ್ಯ ಇನ್ನು 18 ರಿಂದ 20 ತಿಂಗಳು ಮಾತ್ರವಿದ್ದು, ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಸಚಿವರ ರಾಜೀನಾಮೆ ದೊರೆಯುವವರೆಗೆ ಮತ್ತು ಪ್ರಕರಣಕ್ಕೆ ನ್ಯಾಯ ಸಿಗುವವರೆಗೆ ಹೋರಾಟವನ್ನು ತೀವ್ರಗೊಳಿಸುವುದಾಗಿ ರಘುಚಂದನ್ ತಿಳಿಸಿದರು.

ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಸೂಕ್ತ ರೀತಿಯ ಸಂಪುಟ ಪುನರ್ರಚನೆ ಮಾಡಲು ಸಾಧ್ಯವಾಗಿಲ್ಲ. ಸುದೀರ್ಘ ಸಮಯ ತೆಗೆದುಕೊಂಡರೂ ಸಹ ಕೊನೆಗೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದು ದೂರಿದ ಅವರು. ಭ್ರಷ್ಟಾಚಾರ ಹಾಗೂ ಹಗರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವ ಮುಖಂಡರಿಗೆ ಸಚಿವ ಸ್ಥಾನ ನೀಡಿರುವುದನ್ನು ಮುಖಂಡರು ಪ್ರಶ್ನಿಸಿದರು. ಪಕ್ಷದಲ್ಲಿ ರಘುಮೂರ್ತಿ ಅವರಂತಹ ಯಾವುದೇ ಕಂಟಕವಿಲ್ಲದ ಮತ್ತು ಸಕಾರಾತ್ಮಕ ಇಮೇಜ್ ಹೊಂದಿರುವ ನಾಯಕರಿದ್ದರೂ, ಅವರನ್ನು ಪರಿಗಣಿಸದೆ ಭ್ರಷ್ಟ ಆರೋಪ ಹೊತ್ತಿರುವವರನ್ನೇ ಆಯ್ಕೆ ಮಾಡಿರುವುದು ಸರ್ಕಾರದ ನಡೆಯನ್ನು ಸಂಶಯಾಸ್ಪದವಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಒಂದೆಡೆ ಶಾಸಕರು ಹಾಗೂ ನಾಯಕರು ಸದನದ ಒಳಗಡೆ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರಿಗೆ ಸರ್ಕಾರದ ಭ್ರಷ್ಟಾಚಾರದ ಅರಿವು ಮೂಡಿಸಲು ಬಿಜೆಪಿ ಬೀದಿಗೆ ಇಳಿದು ಹೋರಾಟ ಆರಂಭಿಸಿದೆ. ಪ್ರಸ್ತುತ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಸಾಂಕೇತಿಕ ಹಾಗೂ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಶಾಸಕರ ಹಾಗೂ ಸಂಸದರ ಚುನಾವಣೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ತಾತ್ಕಾಲಿಕ ಆಸೆ ಅಥವಾ ಹಣದ ಆಮಿಷಕ್ಕೆ ಒಳಗಾಗದೆ, ದೇಶಭಕ್ತಿ, ಪ್ರಾಮಾಣಿಕತೆ ಹಾಗೂ ಸಮರ್ಥ ನಾಯಕತ್ವವನ್ನು ಹೊಂದಿರುವ ಪಕ್ಷವನ್ನು ಬೆಂಬಲಿಸಬೇಕು ಎಂದು ಬಿಜೆಪಿ ಮುಖಂಡರು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ವಾಲ್ಮೀಕಿ ನಿಗಮಕ್ಕೆ ಸೇರಿದ ಸುಮಾರು 187 ಕೋಟಿ ರೂಪಾಯಿ ಹಣವನ್ನು ಬಾರ್‍ಗಳಿಗೆ, ಆಂಧ್ರಪ್ರದೇಶ ಮತ್ತು ಹೈದರಾಬಾದ್‍ನ ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ, ಚುನಾವಣೆ ವೆಚ್ಚ ಹಾಗೂ ದುಂದುವೆಚ್ಚಕ್ಕೆ ಬಳಸಲಾಗಿದೆ ಎಂದು ಆರೋಪಿಸಿ ಈ ಹಿಂದೆ ಬಿಜೆಪಿ ಹಾಗೂ ಸಮುದಾಯದ ಹೋರಾಟದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು. ಆದರೆ, ಇದೀಗ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸರ್ಕಾರವು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ. ಆದ್ದರಿಂದ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್ ಮಾತನಾಡಿ, ಚಳ್ಳಕೆರೆ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಘುಮೂರ್ತಿ ಅವರು ತಮ್ಮದೇ ಸಮುದಾಯದ ಹಣ ಲೂಟಿಯಾಗಿದ್ದರೂ ಮೌನವಾಗಿದ್ದಾರೆ. ಸಚಿವರು ಈ ವಿಷಯದಲ್ಲಿ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ತಮ್ಮ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಬೇಕು ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಎತ್ತಿಹಿಡಿದು ಸಮುದಾಯಕ್ಕೆ ಸಂಪೂರ್ಣ ನ್ಯಾಯ ಸಿಗುವವರೆಗೆ ಹಾಗೂ ಸಂಬಂಧಪಟ್ಟವರು ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಪ್ರತಿಭಟನೆ ಹಾಗೂ ಧರಣಿ ಮುಷ್ಕರದಲ್ಲಿ ಚಿತ್ರದುರ್ಗದ ಬಿಜೆಪಿ ಮಾಜಿ ಅಧ್ಯಕ್ಷರಾಧ ಎ. ಮುರಳಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೂರನಹಳ್ಳಿ ಶ್ರೀನಿವಾಸ್, ಶ್ರೀಮತಿ ರೇಖಾ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು, ಗ್ರಾಮಾಂತರ ಅಧ್ಯಕ್ಷ ನಾಗರಾಜು, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಸಹಾ ವಕ್ತಾರ ನವೀನ್ ಚಾಲುಕ್ಯ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ಯುವ ಮೋರ್ಚಾ ಅಧ್ಯಕ್ಷ ಆರುಣ್, ಜಿಲ್ಲಾ ಕಾರ್ಯದರ್ಶಿ ಚಂದ್ರು, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಗ್ರಾಮಾಂತರ ಉಪಾಧ್ಯಕ್ಷ ನವೀನ್, ಮಂತೇಶ್, ಪ್ರದೀಪ್ ವಿರೂಪಾಕ್ಷ ನಾಗರಾಜ್ ಲೀಮಾವತಿ ಬಸವೇಶ್ ಸುಮಾ ವಸಂತ್ ಬಸುರಾಜ್ ಕಿರಣ್ ಪ್ರೋ ನಾಗರಾಜ್ ಸೇರಿದಂತೆ ವಿವಿಧ ಮೋರ್ಚಾಗಳ ಮಾಜಿ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಪ್ರಮುಖ ನಾಯಕರು, ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now