ದೆಹಲಿ, ಆಗಸ್ಟ್ 15: ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುವಜನತೆಗೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುವಂತೆ ಉಚಿತ ಆನ್ಲೈನ್ ಕೋಚಿಂಗ್ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದರಿಂದ ದುಬಾರಿ ಕೋಚಿಂಗ್ ಶುಲ್ಕದ ಹೊರೆ ಕಡಿಮೆಯಾಗಲಿದೆ.
ಇದೇ ವೇಳೆ, ಮುಂದಿನ ಒಂದು ವರ್ಷದಲ್ಲಿ ದೇಶಾದ್ಯಂತ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಮಿಷನ್ ಮೋಡ್ನಲ್ಲಿ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
5ರಿಂದ 15 ವರ್ಷದ ಮಕ್ಕಳಿಗೆ ಕ್ರೀಡಾ ಪ್ರತಿಭೆ ಹುಡುಕಾಟ
ಯುವಕರ ಪ್ರತಿಭೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ದೇಶಾದ್ಯಂತ Sports Talent Hunt ಅಭಿಯಾನ ಆರಂಭಿಸುವುದಾಗಿಯೂ ಮೋದಿ ಘೋಷಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ 5ರಿಂದ 15 ವರ್ಷದ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆ: 650 ಹೊಸ ವಿಶ್ವವಿದ್ಯಾಲಯಗಳು
ಕಳೆದ ಒಂದು ದಶಕದಲ್ಲಿ ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ವಿಸ್ತರಣೆ ಕಂಡುಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
2004ರಿಂದ 2014ರವರೆಗೆ ದೇಶದಲ್ಲಿ 350ಕ್ಕಿಂತ ಕಡಿಮೆ ವಿಶ್ವವಿದ್ಯಾಲಯಗಳಿದ್ದವು. ಆದರೆ ಕಳೆದ 10ರಿಂದ 12 ವರ್ಷಗಳಲ್ಲಿ ಸುಮಾರು 650 ಹೊಸ ವಿಶ್ವವಿದ್ಯಾಲಯಗಳು ಸೇರ್ಪಡೆಯಾಗಿವೆ ಎಂದು ಅವರು ತಿಳಿಸಿದರು.
2014ಕ್ಕೂ ಮುನ್ನ ವೈದ್ಯಕೀಯ ಶಿಕ್ಷಣದಲ್ಲಿ ಸುಮಾರು 400 ಸೀಟುಗಳಿದ್ದರೆ, ಇದೀಗ ವೈದ್ಯಕೀಯ ಸೀಟುಗಳ ಸಂಖ್ಯೆ ಸುಮಾರು 850ಕ್ಕೆ ಏರಿಕೆಯಾಗಿದೆ ಎಂದು ಮೋದಿ ಹೇಳಿದರು.
ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದ್ದು, ವಿದೇಶಿ ವಿಶ್ವವಿದ್ಯಾಲಯಗಳೂ ಭಾರತಕ್ಕೆ ಬರುತ್ತಿವೆ. ಭಾರತೀಯ ಯುವಕರು ದೇಶದಲ್ಲಿಯೇ ವಿದೇಶಿ ವಿಶ್ವವಿದ್ಯಾಲಯಗಳ ಪದವಿ ಪಡೆಯಲು ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ವಿವರಿಸಿದರು.
‘ಭಾರತ ಹೊಸ ಎತ್ತರದತ್ತ ಸಾಗುತ್ತಿದೆ’
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, 140 ಕೋಟಿ ಭಾರತೀಯರ ಶಕ್ತಿಯಿಂದ ದೇಶ ವಿವಿಧ ಕ್ಷೇತ್ರಗಳಲ್ಲಿ ಹೊಸ ಎತ್ತರದ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಹೇಳಿದರು.
ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಲು ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದ ಅವರು, ಅವರ ಕನಸುಗಳು ಇಂದಿಗೂ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಪ್ರೇರಣೆಯಾಗಿವೆ ಎಂದು ಹೇಳಿದರು.









