Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆ : ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

---Advertisement---

ದೆಹಲಿ.ಆಗಸ್ಟ್.15: ದೇಶಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಿದರು.

ಪ್ರಧಾನಿ ಮೋದಿ ಅವರು ರಾಷ್ಟ್ರಧ್ವಜ ಹಾರಿಸಿದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಇದೇ ವೇಳೆ 21 ತೋಪುಗಳ ಗೌರವ ವಂದನೆಯೂ ನಡೆಯಿತು. ಧ್ವಜಾರೋಹಣದ ಬಳಿಕ ಕೆಂಪುಕೋಟೆಯ ಆವರಣದಿಂದ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು.

5 ಸಾವಿರ ವಿಶೇಷ ಅತಿಥಿಗಳ ಭಾಗಿ

ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಲು ವಿವಿಧ ಕ್ಷೇತ್ರಗಳಿಗೆ ಸೇರಿದ ಸುಮಾರು 5 ಸಾವಿರ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಅಂತಾರಾಷ್ಟ್ರೀಯ ಯೋಗ ದಿನದ ಸ್ವಯಂಸೇವಕರು, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯಮಿಗಳು, ಉತ್ತಮ ಸಾಧನೆ ಮಾಡಿದ MY Bharat ಸ್ವಯಂಸೇವಕರು, PMAY(U) ಯೋಜನೆಯ ಫಲಾನುಭವಿಗಳು ಹಾಗೂ PM SVANidhi ಯೋಜನೆಯಡಿ ನೆರವು ಪಡೆದ ಬೀದಿ ವ್ಯಾಪಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇದರ ಜೊತೆಗೆ PM Vishwakarma ಯೋಜನೆಯ ಕುಶಲಕರ್ಮಿಗಳು, ಭಾರತ್ ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ವರ್ಗಗಳ ಪ್ರತಿನಿಧಿಗಳೂ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ‘ವಂದೇ ಮಾತರಂ’ ಗಾಯನ

ಈ ಬಾರಿಯ ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಕೂಡ ಸೇರಿದೆ. ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗಾಯನ ನಡೆಯಲಿದೆ. ವಂದೇ ಮಾತರಂನ 150 ವರ್ಷಗಳ ಸುದೀರ್ಘ ಪರಂಪರೆಯನ್ನು ಸ್ಮರಿಸುವುದರ ಜೊತೆಗೆ, 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ, ಉತ್ಸಾಹ ಮತ್ತು ಆಶಯಗಳನ್ನು ಬಿಂಬಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಸುಮಾರು 2,500 ಬಾಲಕ ಮತ್ತು ಬಾಲಕಿಯರ ಕೆಡೆಟ್‌ಗಳು ಹಾಗೂ MY Bharat ಸ್ವಯಂಸೇವಕರು ಪಾಲ್ಗೊಳ್ಳುತ್ತಿದ್ದಾರೆ.

ದೆಹಲಿಯಲ್ಲಿ ಬಿಗಿ ಭದ್ರತೆ

ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ವಿವಿಧ ಭದ್ರತಾ ಸಂಸ್ಥೆಗಳ ಸುಮಾರು 15 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಂಪುಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 1,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ದೇಶದ ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಸ್ಮರಿಸುವುದರ ಜೊತೆಗೆ, ಯುವಶಕ್ತಿ ಮತ್ತು ಅಭಿವೃದ್ಧಿಯ ಸಂಕಲ್ಪವನ್ನು ಸಾರುವ ಸಂದೇಶದೊಂದಿಗೆ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ.

 

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ