ದೆಹಲಿ.ಆಗಸ್ಟ್.15: ದೇಶಾದ್ಯಂತ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸತತ 13ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ‘ವಿಕಸಿತ ಭಾರತ 2047’ ಗುರಿಯತ್ತ ಭಾರತದ ಪಯಣ, ಯುವಶಕ್ತಿಯ ಪಾತ್ರ ಹಾಗೂ ದೇಶದ ಭವಿಷ್ಯ ರೂಪಿಸುವಲ್ಲಿ ಯುವಜನರ ಕೊಡುಗೆ ಪ್ರಮುಖವಾಗಿ ಪ್ರತಿಧ್ವನಿಸಲಿದೆ. ಜೊತೆಗೆ ‘ವಂದೇ ಮಾತರಂ’ ಗೀತೆಯ 150 ವರ್ಷಗಳ ಪರಂಪರೆಯನ್ನೂ ವಿಶೇಷವಾಗಿ ಸ್ಮರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಭಾಗವಾಗಿ ‘ವಂದೇ ಮಾತರಂ’ ಪ್ರದರ್ಶನ ನಡೆಯಲಿದೆ.
ಕೆಂಪುಕೋಟೆಯಲ್ಲಿ ಭವ್ಯ ಸೇನಾ ಗೌರವ
ಪ್ರಧಾನಿ ಮೋದಿ ಅವರು ಕೆಂಪುಕೋಟೆಗೆ ಆಗಮಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್ ಹಾಗೂ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಸ್ವಾಗತಿಸಲಿದ್ದಾರೆ. ಬಳಿಕ ಮೂರು ಸೇನಾ ಪಡೆಗಳು ಮತ್ತು ದೆಹಲಿ ಪೊಲೀಸರನ್ನೊಳಗೊಂಡ ಸಂಯೋಜಿತ ಪಡೆ ಪ್ರಧಾನಿಗೆ ಗೌರವ ವಂದನೆ ಸಲ್ಲಿಸಲಿದೆ.
ನಂತರ ಪ್ರಧಾನಿ ಗಾರ್ಡ್ ಆಫ್ ಆನರ್ ಪರಿಶೀಲನೆ ನಡೆಸಿ ಕೆಂಪುಕೋಟೆಯ ಕೋಟೆ ಭಾಗಕ್ಕೆ ತೆರಳಲಿದ್ದಾರೆ. ಈ ಗಾರ್ಡ್ ಆಫ್ ಆನರ್‌ನಲ್ಲಿ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ದೆಹಲಿ ಪೊಲೀಸರಿಂದ ತಲಾ 24 ಸಿಬ್ಬಂದಿ ಭಾಗವಹಿಸಲಿದ್ದಾರೆ.
21 ತೋಪುಗಳ ಸಿಡಿತದೊಂದಿಗೆ ಧ್ವಜಾರೋಹಣ
ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸುವ ವೇಳೆ 1721 ಫೀಲ್ಡ್ ಬ್ಯಾಟರಿಯಿಂದ 21 ತೋಪುಗಳ ಗೌರವ ವಂದನೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಶೀಯವಾಗಿ ತಯಾರಿಸಲಾದ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಲಾಗುವುದು.
ಧ್ವಜಾರೋಹಣದ ಬಳಿಕ ಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ಧ್ವಜ ಗಾರ್ಡ್ ಪ್ರಧಾನಿಗೆ ರಾಷ್ಟ್ರೀಯ ಸೆಲ್ಯೂಟ್ ನೀಡಲಿದೆ.
ಆಕಾಶದಲ್ಲೂ ದೇಶಭಕ್ತಿಯ ವೈಭವ
ಸ್ವಾತಂತ್ರ್ಯೋತ್ಸವದ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ವೈಮಾನಿಕ ಪ್ರದರ್ಶನವೂ ಸಾಥ್ ನೀಡಲಿದೆ. ಭಾರತೀಯ ವಾಯುಪಡೆಯ ಎರಡು ಎಂಐ-17 ಹೆಲಿಕಾಪ್ಟರ್‌ಗಳು ಕೆಂಪುಕೋಟೆಯ ಮೇಲೆ ಹೂವಿನ ದಳಗಳ ಪುಷ್ಪವೃಷ್ಟಿ ಮಾಡಲಿವೆ.
ಈ ಎಲ್ಲ ವಿಧ್ಯುಕ್ತ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಪ್ರಾಚೀರದಿಂದ ದೇಶವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಲಿದ್ದಾರೆ. ಈ ಭಾಷಣದಲ್ಲಿ ಭಾರತದ ಅಭಿವೃದ್ಧಿಯ ದಿಕ್ಕು, ಯುವಶಕ್ತಿಯ ಸಾಮರ್ಥ್ಯ ಹಾಗೂ ‘ವಿಕಸಿತ ಭಾರತ 2047’ ಕನಸನ್ನು ಸಾಕಾರಗೊಳಿಸುವ ಕುರಿತು ಪ್ರಮುಖ ಸಂದೇಶ ನೀಡುವ ನಿರೀಕ್ಷೆಯಿದೆ.











