Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸ್ವಾಮಿ, ಕುಡಿಯೋ ನೀರು ಕೊಟ್ಟು ಪುಣ್ಯ ಕಟ್ಕೊಳ್ಳಿ: ಹಿರಿಯೂರಿನ ಗಾಂಧಿನಗರ ಮಹಿಳೆಯರ ಆಕ್ರೋಶ, ಉಪಚುನಾವಣೆ ಬಹಿಷ್ಕಾರದ ಎಚ್ಚರಿಕೆ!

---Advertisement---

ಸುದ್ದಿಒನ್, ಹಿರಿಯೂರು, ಆಗಸ್ಟ್. 14 : ಮಳೆಗಾಲ ಆರಂಭವಾಗಿದ್ದರೂ ತಾಲೂಕಿನ ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ (ಗುಂಜಲಗುಂಟೆ) ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮಸ್ಥರು ಒಂದು ಹನಿ ನೀರಿಗೂ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದ ಸಮರ್ಪಕ ನೀರಿಲ್ಲದೆ ಕಂಗಾಲಾಗಿರುವ ಗ್ರಾಮದ ಮಹಿಳೆಯರು, “ಸ್ವಾಮಿ, ನಮ್ಮೂರಿಗೆ ಕುಡಿಯೋ ನೀರು ಬಿಟ್ಟು ಪುಣ್ಯ ಕಟ್ಟಿಕೊಳ್ಳಿ” ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಮನವಿ ಮಾಡಿದ್ದಾರೆ.

ಸುಮಾರು 250ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ಗ್ರಾಮ ಕೇವಲ ಎರಡು ಬೋರ್ವೆಲ್ಗಳನ್ನೇ ನೆಚ್ಚಿಕೊಂಡಿದೆ. ಕಳೆದ ಒಂದು ವಾರದಿಂದ ನಲ್ಲಿಗಳಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ನಾಲ್ಕೈದು ಕೊಡ ತುಂಬುವಷ್ಟರಲ್ಲಿ ನೀರು ಸ್ಥಗಿತಗೊಳ್ಳುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವ್ಯವಸ್ಥೆ ಹಳಿ ತಪ್ಪಿದೆ. ಪರಿಣಾಮವಾಗಿ ಮಹಿಳೆಯರು ದಿನನಿತ್ಯದ ಕೆಲಸ, ಅಡುಗೆ ಹಾಗೂ ಶಾಲೆಗೆ ತೆರಳುವ ಮಕ್ಕಳಿಗೆ ಊಟ ಸಿದ್ಧಪಡಿಸಲು ದೂರದ ತೋಟ-ಹೊಲಗಳಿಗೆ ಮತ್ತು ಬೇರೆ ಊರುಗಳಿಗೆ ಅಲೆದಾಡಬೇಕಾಗಿದೆ. ಜಾನುವಾರುಗಳ ಪಾಲನೆಗೂ ನೀರಿಲ್ಲದೆ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ಅದು ಹೆಸರಿಗಷ್ಟೇ ಸೀಮಿತವಾಗಿದ್ದು, ಸಮರ್ಪಕವಾಗಿ ಬಳಕೆಯಾಗದೆ ಇದ್ದೂ ಇಲ್ಲದಂತಾಗಿದೆ. ಇದರಿಂದಾಗಿ ಗ್ರಾಮಸ್ಥರು ಎರಡು ಕಿಲೋಮೀಟರ್ ದೂರದ ಗೌಡನಹಳ್ಳಿಗೆ ಹೋಗಿ ಕುಡಿಯುವ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ.

ಅಧಿಕಾರಿಗಳು ತಕ್ಷಣವೇ ಟ್ಯಾಂಕರ್ ಮೂಲಕ ಸಮರ್ಪಕ ನೀರು ಪೂರೈಕೆ ಮಾಡಬೇಕು, ಕೆಟ್ಟುಹೋಗಿರುವ ನೀರಿನ ಘಟಕ ದುರಸ್ತಿಪಡಿಸಬೇಕು ಮತ್ತು ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂದು ಗ್ರಾಮದ ಮಹಿಳೆಯರಾದ ರಾಧಮ್ಮ, ಅಶ್ವಿನಿ, ಐಶ್ವರ್ಯ, ಆಶಾ, ಅಂಬಿಕಾ, ಜ್ಯೋತಿ, ಕೃಷ್ಣವೇಣಿ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.

ಜನರ ಸಮಸ್ಯೆ ಆಲಿಸದ ಜನಪ್ರತಿನಿಧಿಗಳು ಕೇವಲ ಚುನಾವಣೆಗೆ ಮಾತ್ರ ಸಜ್ಜಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೂಡಲೇ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ಉಪಚುನಾವಣೆಯ ಮತದಾನವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now