ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಆ.14 : ಕೇಂದ್ರ ನಾಯಕರು ರಾಹುಲ್ ಗಾಂಧಿ ದೇಶದ ಪ್ರಧಾನ ಮಂತ್ರಿಯಾಗಲಿಲ್ಲ ಎಂದು ರಾಜ್ಯದ ಶಾಸಕರು ನಮಗೆ ಮಂತ್ರಿ ಸ್ಥಾನ ಸಿಕ್ಕಲ್ಲ ಎಂದು ದುಃಖದಲ್ಲಿ ಇದ್ದಾರೆ ಒಟ್ಟಾರೆ ಕಾಂಗ್ರೆಸ್ ಪಕ್ಷ ಈಗ ದುಃಖದಲ್ಲಿ ಇದೆ ಎಂದು ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿನ ಅವರ ನಿವಾಸದಲ್ಲಿ ಶುಕ್ರವಾರ ಹರ್ ಘರ್ ತಿರಂಗಾ’ ಅಭಿಯಾನದಡಿಯಲ್ಲಿ ತಮ್ಮ ಮನೆಯ ಮೇಲೆ ಭಾವುಟವನ್ನು ಹಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದು ಮೂರು ವರ್ಷ ಮೂರು ತಿಂಗಳಾಗಿದ್ದರೂ ಆಡಳಿತದ ಕಡೆ ಗಮನಹರಿಸದೆ, ಕೇವಲ ದೆಹಲಿ ನಾಯಕರ ಬಾಗಿಲನ್ನು ಕಾಯುತ್ತಿದೆ ಎಂದು ಆಕ್ರೋಶ ಹೊರಹಾಕಿ ವಿಧಾನಸೌಧದಲ್ಲಿ ಸೂಕ್ತ ಆಡಳಿತ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು,ಅದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಗಮನ ಇಲ್ಲದಾಗಿದೆ ಮುಖ್ಯಮಂತ್ರಿಗಳು ಆಸಮಾಧಾನಗೊಂಡ ಶಾಸಕರನ್ನು ಸಂತೈಹಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ರಾಜ್ಯದಲ್ಲಿ ಆಧಿಕಾರ ಇಲ್ಲದಾಗಿದೆ, ಮಳೆ ಇಲ್ಲದೆ ಕೃಷಿ ಇಲ್ಲವಾಗಿದೆ. ಬರ ನಿರ್ವಹಣೆಗಾಗಿ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಬರ ಘೋಷಣೆ ಮಾಡಬೇಕು ಪ್ರತಿಯೊಂದು ಜಿಲ್ಲೆಗೂ ಕುಡಿಯುವ ನೀರು, ಜಾನುವಾರುಗಳ ಮೇವು ಮತ್ತು ಉದ್ಯೋಗ ಸೃಷ್ಟಿಗಾಗಿ ತಲಾ 100 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ರೈತರು ಸಾಕಲಾಗದೆ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ, ಉದ್ಯೋಗವಿಲ್ಲದೆ ಬಡವರು ವಲಸೆ ಹೋಗುತ್ತಿದ್ದಾರೆ ಹಾಗೂ ಸಾಲದ ಬಾಧೆಯಿಂದ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ ರಾಜ್ಯದಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಬಡವರಿಗೆ ಉದ್ಯೋಗ ಕಲ್ಪಿಸಬೇಕು ಮತ್ತು ರೈತರ ಮುಂಗಾರು ಹಂಗಾಮಿನ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ, ರೈತರ ಬೆಳೆ ವಿಮೆಯನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಿ ರೈತರನ್ನು ಕಾಪಾಡಬೇಕು ಎಂದು ಒತ್ತಾಯಿಸಲಾಯಿತು.
ಆಗಸ್ಟ್ 14: ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ಪೂರ್ವಜರು ತಾಗ-ಬಲಿದಾನಗಳಿಂದ ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕೆ 79 ವರ್ಷಗಳು ಪೂರ್ಣಗೊಂಡು 80ನೇ ವರ್ಷಕ್ಕೆ ನಾಳೆ (ಆಗಸ್ಟ್ 15) ಪಾದಾರ್ಪಣೆ ಮಾಡುತ್ತಿದ್ದೇವೆ ದೇಶಾಭಿಮಾನಿಗಳೆಲ್ಲರೂ ಒಂದು ದೇಶ, ಒಂದು ಕುಟುಂಬ’ ಎಂಬ ಭಾವನೆಯಿಂದ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ,ಹರ್ ಘರ್ ತಿರಂಗಾ’ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಾಜಿ ಅಧ್ಯಕ್ಷ ಎ.ಮುರಳಿ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಎಸ್.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತನ ಕುಮಾರ್, ರವಿಕುಮಾರ್, ಪ್ರಸನ್ನ ಹನುಮಂತಪ್ಪ ಅರುಣ್ ಉಪಸ್ಥಿತರಿದ್ದರು.










