ಬೆಂಗಳೂರು.ಆಗಸ್ಟ್.13: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣದ ಕುರಿತು ಮಾತನಾಡುವಾಗಲೆಲ್ಲ ಶಿಕ್ಷಕರ ನೇಮಕಾತಿ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಲು ಸರ್ಕಾರ ನಿರ್ಧರಿಸಿತ್ತು. ಇದಲ್ಲದೆ ಒಳ ಮೀಸಲಾತಿ ಜಾರಿ ಹಾಗೂ ನ್ಯಾಯಾಲಯದ ತಡೆಯಾಜ್ಞೆ ಸೇರಿದಂತೆ ಹಲವು ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸಲು ವಿಳಂಬವಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ 6,967 ಹುದ್ದೆ
ಒಟ್ಟು 15,000 ಶಿಕ್ಷಕರ ಹುದ್ದೆಗಳಲ್ಲಿ 6,967 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಿಡಲಾಗಿದೆ. ಉಳಿದ 8,033 ಹುದ್ದೆಗಳು ಉಳಿಕೆ ಮೂಲ ವೃಂದದ ಹುದ್ದೆಗಳಾಗಿವೆ.
ಈ ನೇಮಕಾತಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಪ್ರಮುಖವಾಗಿ
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು
ಗಣಕ ವಿಜ್ಞಾನ ಶಿಕ್ಷಕರು
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಮತ್ತು ಗ್ರೇಡ್-2
ಪ್ರೌಢಶಾಲಾ ಸಹ ಶಿಕ್ಷಕರು
ಸೇರಿದಂತೆ ವಿವಿಧ ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಆಗಸ್ಟ್ 18ರಿಂದ ಆನ್ಲೈನ್ ಅರ್ಜಿ
ಶೈಕ್ಷಣಿಕ ಜಿಲ್ಲಾವಾರು ಖಾಲಿ ಇರುವ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿ ನೇಮಕಾತಿ ನಡೆಸಲು ಸರ್ಕಾರ ನಿರ್ಧರಿಸಿದೆ. 2026ರ ಆಗಸ್ಟ್ 18ರಿಂದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಈಗಾಗಲೇ ಸರ್ಕಾರದ ಇ-ರಾಜ್ಯಪತ್ರ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಹುದ್ದೆಗಳ ಸಂಖ್ಯೆ ಎಷ್ಟು, ಮೀಸಲಾತಿ ಹಂಚಿಕೆ ಹೇಗಿದೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಮಾಡಿರುವ ಬದಲಾವಣೆಗಳೇನು ಎಂಬ ಮಾಹಿತಿಯನ್ನು ಅಧಿಸೂಚನೆಗಳ ಮೂಲಕ ಪಡೆಯಬಹುದು.
ಅರ್ಜಿ ಸಲ್ಲಿಕೆ ಆನ್ಲೈನ್ ಮೂಲಕ ಮಾತ್ರ ನಡೆಯಲಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
ಪಾರದರ್ಶಕ ನೇಮಕಾತಿಗೆ ಸೂಚನೆ
ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಹಾಗೂ ಸಂಪೂರ್ಣ ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.














