ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 12 : ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ವಿರೋಧಿಸಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಿಸಿಂತೆ ತಪ್ಪಿತಸ್ಥರ ವಿರುದ್ದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ಹೊಳಲ್ಕೆರೆ ಬ್ಲಾಕ್ ಯೂತ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬುಧವಾರ ಶಾಂತಿಯುತ ಪ್ರತಿಭಟನೆ ನಡೆಸಿ ಪ್ರಮುಖ ಸ್ಥಳಗಳು ಹಾಗೂ ಪೆಟ್ರೋಲ್ ಬಂಕ್ಗಳ ಬಳಿ ಪೋಸ್ಟರ್ಗಳನ್ನು ಅಂಟಿಸಲಾಯಿತು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥಗೌಡರವರ ಸೂಚನೆಯಂತೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ಮೌನ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೊಳಲ್ಕೆರೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಮಾತನಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಕಲಿ ಪೊಲೀಸರು ಜಂತರ್-ಮಂತರ್ನಲ್ಲಿ ಪ್ರವೇಶಿಸಿದ್ದಾದರೂ ಹೇಗೆ? ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕಿದೆ ಎನ್ನುವುದು ಗೊತ್ತಾಗುತ್ತದೆ. ಗೃಹ ಸಚಿವ ಅಮಿತ್ಶಾ ಸದನದಲ್ಲಿ ಉತ್ತರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಎಫ್.ಐ.ಆರ್.ನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಮುಖಂಡರುಗಳಾದ ಎಂ.ಡಿ.ಸಾಧಿಕ್ ಯೂಸುಫ್, ಶಶಿಧರ್ ಬತ್ತಯ್ಯನಹಟ್ಟಿ, ಧನಂಜಯ್, ಬೋರಯ್ಯ, ಮಹಾಂತೇಶ್, ಪ್ರದೀಪ್ ಸೇರಿದಂತೆ ಪದಾಧಿಕಾರಿಗಳು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









