ಮುಂಬೈ.ಆಗಸ್ಟ್.12: ಆಗಸ್ಟ್ 18 ರಂದು ನಡೆಯಲಿರುವ ಟಾಟಾ ಸನ್ಸ್ ಕಂಪನಿಯ ವಾರ್ಷಿಕ ಮಹಾಸಭೆಗೆ (AGM) ಕೆಲವೇ ದಿನಗಳಿರುವಾಗ, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಆಕಸ್ಮಿಕ ಬೆಳವಣಿಗೆಯ ಬೆನ್ನಲ್ಲೇ ಟಾಟಾ ಸಮೂಹದ ವಿವಿಧ ಕಂಪನಿಗಳ ಶೇರು ಮೌಲ್ಯದಲ್ಲಿ ತೀವ್ರ ಕುಸಿತ ಕಂಡಿದೆ.
ನನ್ನ ಪ್ರಸ್ತುತ ಅವಧಿ ಮುಕ್ತಾಯಗೊಂಡ ನಂತರ ಮುಂದಿನ ಅವಧಿಗೆ ನಾನು ಮರುನೇಮಕಗೊಳ್ಳಲು ಬಯಸುವುದಿಲ್ಲ ಎಂದು ಟಾಟಾ ಸನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಸುಸೂತ್ರ ಅಧಿಕಾರ ಹಸ್ತಾಂತರ ಮತ್ತು ಉತ್ತರಾಧಿಕಾರಿಯ ಆಯ್ಕೆಯ ಬಗ್ಗೆ ಮಂಡಳಿಯು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿದ್ದೇನೆ,” ಎಂದು ಚಂದ್ರಶೇಖರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎನ್. ಚಂದ್ರಶೇಖರನ್ ಅವರ ಹಾಲಿ ಅಧಿಕಾರಾವಧಿಯು ಫೆಬ್ರವರಿ 2027 ರವರೆಗೆ ಇತ್ತು. ಆದರೆ, ಅವಧಿಗೂ ಮುನ್ನವೇ ಅವರು ನಿರ್ಗಮಿಸುತ್ತಿದ್ದು, ಮುಂದಿನ ಅವಧಿಗೆ ಮುಂದುವರಿಯದಿರಲು ನಿರ್ಧರಿಸಿದ್ದಾರೆ.
ಸಾಮಾನ್ಯ ಶೇರುದಾರರೊಂದಿಗಿನ ಭಿನ್ನಾಭಿಪ್ರಾಯ ಹಾಗೂ ಇತ್ತೀಚೆಗೆ ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನೋಯೆಲ್ ಟಾಟಾ ಮತ್ತು ಚಂದ್ರಶೇಖರನ್ ನಡುವೆ ಉಂಟಾದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇ ಈ ದಿಢೀರ್ ರಾಜೀನಾಮೆಗೆ ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ.









