ಚಿತ್ರದುರ್ಗ.ಆ.11: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೂಲತಃ ಸರ್ಕಾರಿ ನೌಕರರೇ ಆಗಿದ್ದು, ಸಿಕ್ಕಿರುವ ಈ ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನಸೇವೆ ಮಾಡುವುದು ಎಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಏಳು ಕೋಟಿ ಜನರಿದ್ದು, ಅದರಲ್ಲಿ ಕೇವಲ ಐದೂವರೆ ಲಕ್ಷ ಜನರಿಗೆ ಮಾತ್ರ ಸರ್ಕಾರಿ ಸೇವೆಯ ಭಾಗ್ಯ ಸಿಕ್ಕಿದೆ. ದೇವರು ಯಾರಿಗೂ ವರ ಅಥವಾ ಶಾಪ ಕೊಡುವುದಿಲ್ಲ, ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ನಮಗೆ ಸಿಕ್ಕಿರುವ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಗೋಡೆಯ ಮೇಲೆ ‘ಸರ್ಕಾರದ ಕೆಲಸ ದೇವರೆ ಕೆಲಸ ಎಂದು ಕೆತ್ತಲಾಗಿದೆ. ಸರ್ಕಾರಿ ನೌಕರರು ತಮ್ಮ ಅಪಾರ ಅನುಭವವನ್ನು ಬಳಸಿಕೊಂಡು ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರದ ಕಲ್ಯಾಣ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಪ್ರಮುಖವಾಗಿದೆ.
ವಿಶ್ವದ ಪ್ರಮುಖ ದೇಶಗಳ ನಾಯಕರು ಭಾರತಕ್ಕೆ ಬಂದಾಗ ದೆಹಲಿಗಿಂತ ಮೊದಲೇ ಬೆಂಗಳೂರಿಗೆ ಭೇಟಿ ನೀಡಲು ಬಯಸುತ್ತಿದ್ದಾರೆ. ರಾಜ್ಯ ಈ ಮಟ್ಟದ ಜಾಗತಿಕ ಗುರುತು ಹಾಗೂ ಕೀರ್ತಿ ಪಡೆಯಲು ನೌಕರರ ನಿರಂತರ ಶ್ರಮ ಮತ್ತು ದಕ್ಷ ಸೇವೆಯೇ ಕಾರಣ. ನೌಕರರೇ ಸರ್ಕಾರದ ನಿಜವಾದ ‘ನಾಡಿಮಿಡಿತ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
*ಕೇಂದ್ರಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವುದು ಕಡ್ಡಾಯ:*
ರಾಜ್ಯ ಸರ್ಕಾರಿ ನೌಕರರ ಪೈಕಿ ಶೇ. 60ಕ್ಕಿಂತ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಯೋಜಿತ ಕೇಂದ್ರಸ್ಥಾನದಲ್ಲಿ ತಂಗದಿರುವುದು ಕಂಡುಬಂದಿದೆ. ಪಿಡಿಓ,ವಿಎ ಸೇರಿದಂತೆ ಮೇಲಧಿಕಾರಿಗಳವರೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಕಾರ್ಯಕ್ಷೇತ್ರದಲ್ಲೇ ವಾಸವಾಗಿದ್ದು, ಜನರಿಗೆ ಲಭ್ಯವಿರಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನ ನೀಡಿದರು.
ಜನಸೇವೆ ಕಾರ್ಯಕ್ರಮಗಳ ಭಾಗವಾಗಿ ಸಚಿವರು, ಶಾಸಕರು ಹಾಗೂ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳು ಮೊದಲ ಮತ್ತು ಮೂರನೇ ಶನಿವಾರ ಪ್ರಜಾಸೇವೆ ಇಲಾಖೆ ಮೂಲಕ ಜನಸ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಬೇಕು. ನಂತರ ಈ ಕಾರ್ಯಕ್ರಮವನ್ನು ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗುವುದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಸರ್ಕಾರದ ಯೋಜನೆಗಳು ತಳಮಟ್ಟಕ್ಕೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
*ಭೂ-ಗ್ಯಾರಂಟಿ ಯೋಜನೆ:*
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಲಕ್ಷ ಮನೆಗಳಿಗೆ ಉಚಿತವಾಗಿ ಈ-ಖಾತಾ ನೀಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲೂ 1 ಕೋಟಿ 11 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ಲಭಿಸಲಿದೆ.ಜನರು ವಾಸಿಸುವ ಆಸ್ತಿಗೆ ಭದ್ರತೆ ನೀಡುವುದು ಸರ್ಕಾರದ ಮೂಲ ಉದ್ದೇಶವಾಗಿದ್ದು ಇದು ಸರ್ಕಾರ ಭೂ ಗ್ಯಾರಂಟಿ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನೌಕರರು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಕುಂದುಕೊರತೆಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲೇ ಕಳಕಳಿಯಿಂದ ಪರಿಹರಿಸಬೇಕು ಎಂದು ಕರೆ ನೀಡಿದರು.
ಅರ್ಜಿದಾರರು ಅಥವಾ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರಿನ ವರೆಗೆ ಅಲೆಯುವ ಅಗತ್ಯ ಬಾರದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲೇ ಪಾರದರ್ಶಕವಾಗಿ ಪರಿಹಾರ ಒದಗಿಸಬೇಕು ಎಂದು ಸ್ಪಷ್ಟಪಡಿಸಿದರು.
*ಭ್ರಷ್ಟಾಚಾರ ಸಹಿಸಲ್ಲ: ಕಠಿಣ ಕ್ರಮದ ಎಚ್ಚರಿಕೆ:*
ಆಡಳಿತದಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ತೊಡಗುವುದನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.
ಅಧಿಕಾರಿಗಳು ಆಡಳಿತದಲ್ಲಿ ಪಾರದರ್ಶಕತೆ ತರಲು ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಸದುಪಯೋಗ ಪಡಿಸಿಕೊಳ್ಳುಬೇಕು. ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು, ರಾಜ್ಯ ಸರ್ಕಾರದ ಎಲ್ಲಾ ಹಂತದ ನೌಕರರು ಒಂದು ತಂಡವಾಗಿ ಯುದ್ಧೋಪದಿಯಲ್ಲಿ ಕೆಲಸ ಮಾಡಲು ಮುಖ್ಯಮಂತ್ರಿ ಕರೆ ನೀಡಿದ್ದಾರೆ ಎಂದರು.

ಸದ್ಯ ರಾಜ್ಯದ 11 ತಾಲೂಕುಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವವಿದ್ದು, ಒಟ್ಟು 166 ತಾಲೂಕುಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಮುಖ್ಯಮಂತ್ರಿಗಳು ವಿಧಾನ ಸಭಾ ಕ್ಷೇತ್ರಕ್ಕೂ ರೂ.1 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಜನರಿಗೆ ಶುದ್ಧ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೂಲಿ ಸಿಗುವಂತೆ ನೋಡಿಕೊಳ್ಳುವುದು ಮತ್ತು ವಲಸೆ ತಡೆಯುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಬಿ ಜಿ ರಾಮ್ ಯೋಜನೆ ಕಾರ್ಯಗತ ಬಳಸಿಕೊಂಡು ಜನರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಚಿವರುಗಳಾದ ಲಕ್ಷಣ ಸೌದಿ,ಅಜಯ್ ಸಿಂಗ್, ವಿಜಯಾನಂದ ಕಾಶಪ್ಪನವರ ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಇದ್ದರು.












