ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳು ಸಂಭವಿಸುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ, ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ದೃಷ್ಟಿಯಿಂದ ಕೆಲವು ಸಾಂಪ್ರದಾಯಿಕ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಪಂಡಿತರು ಮತ್ತು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಗ್ರಹಣದ ಅವಧಿಯಲ್ಲಿ ಗರ್ಭಿಣಿಯರು ಅನುಸರಿಸಬೇಕಾದ ಪ್ರಮುಖ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳು ಕೆಳಗಿನಂತಿವೆ:
ಗ್ರಹಣವನ್ನು ನೇರವಾಗಿ ನೋಡಬೇಡಿ ಹಾಗೂ ಹೊರಗೆ ಹೋಗಬೇಡಿ

ಗ್ರಹಣದ ಸಮಯದಲ್ಲಿ ಹೊರಹೊಮ್ಮುವ ಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಈ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗದೆ, ಪ್ರಶಾಂತವಾಗಿ ಮನೆಯೊಳಗಿರುವುದು ಒಳ್ಳೆಯದು. ಗ್ರಹಣವನ್ನು ನೇರವಾಗಿ ವೀಕ್ಷಿಸುವುದನ್ನು ತಪ್ಪಿಸಬೇಕು.
ಭಯಪಡುವ ಅಗತ್ಯವಿಲ್ಲ
ಗ್ರಹಣ ಎಂದರೆ ತಕ್ಷಣವೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಪ್ರಶಾಂತ ಚಿತ್ತದಿಂದ ಇದ್ದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ಚೂಪಾದ ವಸ್ತುಗಳ ಬಳಕೆಯಿಂದ ದೂರವಿರಿ
ಗ್ರಹಣ ನಡೆಯುವ ಸಮಯದಲ್ಲಿ ಕತ್ತರಿ, ಚಾಕು ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು. ತರಕಾರಿ ಕತ್ತರಿಸುವುದು, ಅಡುಗೆ ಮಾಡುವುದು ಅಥವಾ ಹೊಲಿಗೆ ಕೆಲಸಗಳಂತಹ ಚಟುವಟಿಕೆಗಳಿಂದ ದೂರವಿರಲು ಸೂಚಿಸಲಾಗುತ್ತದೆ.
ಆಹಾರ ಮತ್ತು ನೀರಿನ ಜಾಗ್ರತೆ
ಗ್ರಹಣ ಆರಂಭವಾಗುವ ಮುನ್ನವೇ ಬೇಗನೇ ಜೀರ್ಣವಾಗುವ ಹಗುರವಾದ ಆಹಾರವನ್ನು ಸೇವಿಸುವುದು ಸೂಕ್ತ.
ಗ್ರಹಣದ ಪ್ರಭಾವ ತಗಲದಿರಲು ಕುಡಿಯುವ ನೀರು ಮತ್ತು ಸಂಗ್ರಹಿಸಿಟ್ಟ ಆಹಾರದ ಮೇಲೆ ‘ದರ್ಭೆ’ (ದರ್ಬ ಹುಲ್ಲು) ಹಾಕಿಡುವುದು ಒಳ್ಳೆಯದು. ಇದರಿಂದ ಗ್ರಹಣದ ನಂತರವೂ ಆ ಆಹಾರ/ನೀರನ್ನು ಸುರಕ್ಷಿತವಾಗಿ ಬಳಸಬಹುದು.
(ಗಮನಿಸಿ: ಈ ಮಾಹಿತಿಯು ಜ್ಯೋತಿಷ್ಯ, ಸಾಂಪ್ರದಾಯಿಕ ನಂಬಿಕೆಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಆಧರಿಸಿದೆ.)









