ಬಳ್ಳಾರಿ.ಆಗಸ್ಟ್.11: ಬಿ.ಪಿ.ಸಿ ಎಲ್.ಪಿ.ಜಿ ಗ್ರಾಹಕರು ಆಗಸ್ಟ್ 15 ರೊಳಗೆ ತಮಗೆ ಸಂಬಂಧಿಸಿದ ಎಲ್.ಪಿ.ಜಿ ಅನಿಲ ವಿತರಕರ ಬಳಿ ತೆರಳಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.
ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಿದ್ದಲ್ಲಿ ಅನಿಲ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡು ತೊಂದರೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಅದೇರೀತಿಯಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಗಸ್ಟ್ ಹಾಗೂ ಸೆಪ್ಟೆಂಬರ್-2026 ರ ಮಾಹೆಯ ಪಡಿತರ ಆಹಾರಧಾನ್ಯವನ್ನು ಆಗಸ್ಟ್ ಮಾಹೆಯಲ್ಲೇ ಒಟ್ಟಿಗೆ ವಿತರಿಸಲಾಗುತ್ತಿದೆ.
ಅಂತ್ಯೋದಯ ಕಾರ್ಡುದಾರರಿಗೆ 2 ತಿಂಗಳ ಪಡಿತರವಾಗಿ ಒಟ್ಟು 42 ಕೆ.ಜಿ. ಜೋಳ ಹಾಗೂ 28 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ಬಿ.ಪಿ.ಎಲ್ ಕಾರ್ಡುದಾರರಿಗೆ ಕಾರ್ಡಿನ ಪ್ರತಿ ಸದಸ್ಯರಿಗೆ 2 ತಿಂಗಳಿಗೆ 6 ಕೆ.ಜಿ. ಜೋಳ ಹಾಗೂ 4 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ರಾಜ್ಯ ಪಡಿತರ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ಮಾತ್ರ ನೀಡಲಾಗುತ್ತದೆ.
2 ತಿಂಗಳ ಪಡಿತರ ಪಡೆಯುವುದರಿಂದ ನ್ಯಾಯಬೆಲೆ ಅಂಗಡಿಯಲ್ಲಿ 2 ಬಾರಿ ಬಯೋಮೆಟ್ರಿಕ್ ದಾಖಲಿಸಿ ಪಡಿತರ ಪಡೆಯಬೇಕು ಮತ್ತು ಎಲ್ಲಾ ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಾರ್ಡಿನಲ್ಲಿ ಹೆಸರಿರುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ತಮ್ಮ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬೇಕು.
ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಅಕ್ರಮಗಳಿದ್ದಲ್ಲಿ ಸಂಬಂಧಿಸಿದ ತಾಲೂಕು ತಹಶೀಲ್ದಾರ್ ಕಚೇರಿ ಅಥವಾ ಆಹಾರ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಬಳ್ಳಾರಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










