ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ಆಗಸ್ಟ್ 14, 2026ರಂದು ಸ್ಪೀಕರ್ ಚುನಾವಣೆ ನಡೆಯಲಿದೆ. ರಾಜ್ಯಪಾಲ ಥಾವರ್ಚಂದ್ ಗೆಹೋಟ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ರಾಜ್ಯಪತ್ರದ ಮೂಲಕ ಅಧಿಸೂಚನೆ ಪ್ರಕಟಿಸಿದೆ.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ 7ನೇ ನಿಯಮದ (1)ನೇ ಉಪನಿಯಮದಡಿ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ಬಳಸಿ ಸ್ಪೀಕರ್ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.ಆಗಸ್ಟ್ 13ರಿಂದ ಮುಂಗಾರು ಅಧಿವೇಶನ
ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ಆಗಸ್ಟ್ 13ರಿಂದ ಆರಂಭವಾಗಲಿದ್ದು, ಅಧಿವೇಶನದ ಎರಡನೇ ದಿನವಾದ ಆಗಸ್ಟ್ 14ರಂದು ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.
ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ನೂತನ ಸಭಾಧ್ಯಕ್ಷರು ಅಧಿಕಾರ ಸ್ವೀಕರಿಸುವವರೆಗೆ ಸದನದ ಕಲಾಪವನ್ನು ನಿರ್ವಹಿಸಲು ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ಪ್ರೊಟೆಮ್ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ.ಯು.ಟಿ. ಖಾದರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ
ಹಿಂದಿನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಇದೀಗ ಹೊಸ ಸಭಾಧ್ಯಕ್ಷರ ಆಯ್ಕೆಗೆ ಅಧಿಕೃತ ಪ್ರಕ್ರಿಯೆ ಆರಂಭವಾಗಿದೆ.
ಆಡಳಿತಾರೂಢ ಕಾಂಗ್ರೆಸ್ನಲ್ಲಿ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಮುಂಚೂಣಿಯಲ್ಲಿದೆ ಎನ್ನಲಾಗಿದ್ದು, ಉಪಸಭಾಧ್ಯಕ್ಷ ಸ್ಥಾನಕ್ಕೆ ಎ.ಎಸ್. ಪೊನ್ನಣ್ಣ ಅವರ ಹೆಸರು ಕೇಳಿಬರುತ್ತಿದೆ.


ರಾಜ್ಯಪಾಲರಿಂದ ಚುನಾವಣೆಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ವಿಧಾನಸಭೆಗೆ ನೂತನ ಸ್ಪೀಕರ್ ಆಯ್ಕೆಯಾಗುವುದು ಖಚಿತವಾಗಿದೆ.








