ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.09: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂರಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ಹಾಗೂ ರೈತರ ನಿದ್ದೆಗೆಡಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಶನಿವಾರ ರಾತ್ರಿ ಸೆರೆಯಾಗಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದ ಹೊಲ-ಗದ್ದೆಗಳ ಬಳಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ, ಕುರಿ ಹಾಗೂ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ತೀವ್ರ ಭೀತಿ ಹುಟ್ಟಿಸಿತ್ತು. ಬೆಳೆ ಹಾನಿ ಮತ್ತು ಮಳೆ ಅಭಾವದ ನಡುವೆ ಕಂಗಾಲಾಗಿದ್ದ ರೈತರಿಗೆ ಚಿರತೆಯ ಹಾವಳಿ ಮತ್ತಷ್ಟು ಆತಂಕ ತಂದೊಡ್ಡಿತ್ತು.
ಈ ಕುರಿತು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಜಾಗೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಿರತೆ ಸೆರೆಗೆ ನಾಲ್ಕು ದಿನಗಳ ಹಿಂದೆ ಸೂರಗೊಂಡನಹಳ್ಳಿಯ ಹೊಲವೊಂದರ ಬಳಿ ಬೋನು ಅಳವಡಿಸಿದ್ದರು. ಶನಿವಾರ ರಾತ್ರಿ ಬೋನಿನೊಳಗೆ ಬಂದ ಚಿರತೆ ಸೆರೆಯಾಗಿದೆ.

ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಇನ್ನೂ 2-3 ಚಿರತೆಗಳು ಹಾಗೂ ಮರಿಗಳು ಓಡಾಡುತ್ತಿವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ತಕ್ಷಣವೇ ಮತ್ತೊಂದು ಬೋನು ಅಳವಡಿಸಿ ಉಳಿದ ಚಿರತೆಗಳನ್ನೂ ಸೆರೆಹಿಡಿದು ರೈತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.









