ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 09 : ಕೃಷಿ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ಮೋಟಾರ್ ಪಂಪ್ ಸೆಟ್ಗಳು ಹಾಗೂ ಇತರೆ ಕೃಷಿ ಉಪಕರಣಗಳ ಕಳ್ಳತನ ಪ್ರಕರಣಗಳನ್ನು ತಡೆಯಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ರೈತರಿಗೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದೆ.
ಇತ್ತೀಚಿನ ದಿನಗಳಲ್ಲಿ ಕೃಷಿ ಜಮೀನುಗಳಲ್ಲಿರುವ ಮೋಟಾರ್ ಪಂಪ್ಗಳು, ಕೇಬಲ್ಗಳು ಹಾಗೂ ಇತರೆ ಉಪಕರಣಗಳನ್ನು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ರೈತರು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು :
ಮೋಟಾರ್ ಪಂಪ್ ಕೊಠಡಿಗೆ ಗಟ್ಟಿಯಾದ ಬಾಗಿಲು ಹಾಗೂ ಉತ್ತಮ ಗುಣಮಟ್ಟದ ಲಾಕ್ ಅಳವಡಿಸಬೇಕು.
ರಾತ್ರಿ ವೇಳೆ ಜಮೀನಿನಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಧ್ಯವಾದಲ್ಲಿ CCTV ಕ್ಯಾಮೆರಾ ಹಾಗೂ ಸೈರನ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು.
ದುಬಾರಿ ತಾಮ್ರದ ಕೇಬಲ್ಗಳ ಬದಲಿಗೆ ಸುರಕ್ಷಿತ PVC ವೈರ್ ಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ಮೋಟಾರ್ ಬಳಕೆಯಲ್ಲಿಲ್ಲದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ಆಫ್ ಮಾಡಿ, ಕೇಬಲ್ಗಳನ್ನು ಸುರಕ್ಷಿತವಾಗಿ ಇಡಬೇಕು.
ಮೋಟಾರ್ ಹಾಗೂ ಪಂಪ್ಗಳ ಮಾದರಿ, ಸಂಖ್ಯೆ ಮತ್ತು ಇತರೆ ಗುರುತುಗಳನ್ನು ದಾಖಲಿಸಿಕೊಂಡು ಇಟ್ಟುಕೊಳ್ಳಬೇಕು.
ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಾಹನಗಳು ಜಮೀನಿನ ಸುತ್ತಮುತ್ತ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ನೆರೆಹೊರೆಯ ರೈತರೊಂದಿಗೆ ಸಂಪರ್ಕದಲ್ಲಿದ್ದು, ರಾತ್ರಿ ವೇಳೆ ಸಾಮೂಹಿಕವಾಗಿ ನಿಗಾ ವಹಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು.
ಪೊಲೀಸ್ ಠಾಣೆಗೆ ಮಾಹಿತಿ ನೀಡಿ

ಕಳ್ಳತನ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಡ ಮಾಡದೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇಲಾಖೆ ತಿಳಿಸಿದೆ. ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು.
ಕಳ್ಳತನ ತಡೆಗೆ ಇನ್ನಷ್ಟು ಮುನ್ನೆಚ್ಚರಿಕೆ :
ರೈತರು ತಮ್ಮ ಜಮೀನುಗಳ ಸುತ್ತಮುತ್ತ ಅನಗತ್ಯವಾಗಿ ಸಂಚರಿಸುವ ವ್ಯಕ್ತಿಗಳ ಬಗ್ಗೆ ಗಮನಹರಿಸಬೇಕು. ಮೋಟಾರ್ ಪಂಪ್ಗಳ ಸುರಕ್ಷತೆಗಾಗಿ ಸೂಕ್ತವಾದ ಬೀಗ, ಬೆಳಕು ಮತ್ತು CCTV ವ್ಯವಸ್ಥೆ ಅಳವಡಿಸಿಕೊಳ್ಳುವುದು ಸಹಕಾರಿಯಾಗಲಿದೆ.
ರೈತರ ಜಾಗೃತಿ ಮತ್ತು ಮುನ್ನೆಚ್ಚರಿಕೆಯೇ ಕೃಷಿ ಉಪಕರಣಗಳ ಕಳ್ಳತನ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.










