Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

23,731 ಕೋಟಿ ರೂ. ವೆಚ್ಚದ ‘ಗೋಬರ್ಧನ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಂಕಿತ

---Advertisement---

ದೆಹಲಿ.ಆಗಸ್ಟ್.8: ಭಾರತದ ಆರ್ಥಿಕ ಪ್ರಗತಿ ಮತ್ತು ಇಂಧನ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ದೇಶದ ಕೃಷಿ ತ್ಯಾಜ್ಯ ಹಾಗೂ ಸಗಣಿಯನ್ನು ಸ್ವಚ್ಛ ಇಂಧನವನ್ನಾಗಿ ಪರಿವರ್ತಿಸುವ ‘ಗೋಬರ್ಧನ್’ (ಗ್ಯಾಲ್ವನೈಸಿಂಗ್ ಆರ್ಗ್ಯಾನಿಕ್ ಬಯೋ-ಆಗ್ರೋ ರಿಸೋರ್ಸಸ್ ಧನ್) ಯೋಜನೆಗೆ ಕೇಂದ್ರ ಸಚಿವ ಸಂಪುಟವು 23,731 ಕೋಟಿ ರೂಪಾಯಿಗಳ ಅನುಮೋದನೆ ನೀಡಿದೆ.

ಈ ಯೋಜನೆಯು 2026-27ರಿಂದ 2035-36ರ ಹಣಕಾಸು ವರ್ಷದವರೆಗೆ ಜಾರಿಯಲ್ಲಿರಲಿದ್ದು, ದೇಶದಲ್ಲಿ ಸಂಕುಚಿತ ಜೈವಿಕ ಅನಿಲ (ಸಿಬಿಜಿ) ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿ ಹೊಂದಿದೆ. ದನಕರುಗಳ ಸಗಣಿ, ಬೆಳೆ ತ್ಯಾಜ್ಯ ಮತ್ತು ಕಬ್ಬಿನ ಅಲೆಮನೆಯ ತ್ಯಾಜ್ಯಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಈ ಅನಿಲವು ನೈಸರ್ಗಿಕ ಅನಿಲದಂತೆಯೇ ಇದ್ದು, ವಾಹನಗಳಿಗೆ ಸಿಎನ್‌ಜಿ ಹಾಗೂ ಮನೆಗಳ ಅಡುಗೆಗೆ ಪಿಎನ್‌ಜಿ ರೂಪದಲ್ಲಿ ಬಳಕೆಯಾಗಲಿದೆ.

ಈ ಯೋಜನೆಯ ಮುಖ್ಯ ಉದ್ದೇಶ ವಿದೇಶಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದಾಗಿದೆ. ಭಾರತದ ತ್ಯಾಜ್ಯವೇ ಭಾರತದ ಬೆಳವಣಿಗೆಗೆ ಇಂಧನವಾಗಲಿದೆ ಹಾಗೂ ರೈತರು ಇಂಧನ ಭದ್ರತೆಯ ಪಾಲುದಾರರಾಗಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಈ ಹೊಸ ಉದ್ಯಮಕ್ಕೆ ಬೆಂಬಲ ನೀಡಲು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲದ ಗ್ಯಾರಂಟಿ, ಹೊಸ ಘಟಕಗಳ ಸ್ಥಾಪನೆಗೆ 2 ಕೋಟಿ ರೂ.ವರೆಗಿನ ಬಂಡವಾಳ ನೆರವು, ಸಿಬಿಜಿ ಖರೀದಿ ಮತ್ತು ಪೈಪ್‌ಲೈನ್ ಸಂಪರ್ಕಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಿಬಿಜಿ ಉತ್ಪಾದಕರಿಗೆ 10 ವರ್ಷಗಳ ಕಾಲ ಸ್ಥಿರ ಬೆಲೆಯ ಭರವಸೆಯನ್ನೂ ನೀಡಲಾಗಿದೆ.

ಈ ಯೋಜನೆಯಿಂದ ರೈತರಿಗೆ ಕೃಷಿ ತ್ಯಾಜ್ಯ ಮಾರಾಟದ ಮೂಲಕ ಹೆಚ್ಚುವರಿ ಆದಾಯ ಸಿಗಲಿದೆ. ತ್ಯಾಜ್ಯ ನಿರ್ವಹಣೆ ಸುಲಭವಾಗಿ ಪರಿಸರ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ, ಉಪಉತ್ಪನ್ನವಾಗಿ ದೊರೆಯುವ ಸಾವಯವ ಗೊಬ್ಬರವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲಿದೆ. ಪ್ರಸ್ತುತ ದೇಶದಲ್ಲಿ ‘ಸತತ್’ ಯೋಜನೆಯಡಿ 200ಕ್ಕೂ ಹೆಚ್ಚು ಸಿಬಿಜಿ ಘಟಕಗಳು ಕಾರ್ಯಾಚರಿಸುತ್ತಿದ್ದು, ಈಗ ಗೋಬರ್ಧನ್ ಯೋಜನೆ ಇಡೀ ವ್ಯವಸ್ಥೆಯನ್ನು ಒಂದೇ ಸೂರಿನಡಿ ತಂದು ದೇಶದ ಆರ್ಥಿಕತೆಗೆ ಬಲ ನೀಡಲಿದೆ.

Join WhatsApp

Join Now

Join Telegram

Join Now