ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ 14ನೇ ಆರೋಪಿ ಪ್ರದೋಶ್ ನ್ಯಾಯಾಲಯಕ್ಕೆ ‘ಮಾಫಿ ಸಾಕ್ಷಿ’ (Approver) ಆಗಲು ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.ಪ್ರದೋಶ್ ಮಾಫಿ ಸಾಕ್ಷಿಯಾದರೆ ಪ್ರಕರಣದ ವಿಚಾರಣೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆದಿದೆ. ತಮ್ಮ ಪೋಸ್ಟ್‌ನಲ್ಲಿ, ಪ್ರದೋಶ್ ಮಾಫಿ ಸಾಕ್ಷಿಯಾಗುವುದರಿಂದ ನಟ ದರ್ಶನ್‌ಗೆ ತೊಂದರೆಯಾಗುವುದಿಲ್ಲ, ಬದಲಾಗಿ ಕೆಲವು ಹೊಸ ಸಂಗತಿಗಳು ಬೆಳಕಿಗೆ ಬರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ನೇಹಮಯಿ ಕೃಷ್ಣ ಅವರ ಆರೋಪದ ಪ್ರಕಾರ, ರೇಣುಕಾಸ್ವಾಮಿ ಹತ್ಯೆಯ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಸಾಡಿ ಪ್ರಕರಣವನ್ನು ಬೇರೆ ದಿಕ್ಕಿಗೆ ತಿರುಗಿಸಲು ಸಂಚು ರೂಪಿಸಲಾಗಿತ್ತು. ಈ ಸಂಚಿನಲ್ಲಿ ಪ್ರದೋಶ್ ಜೊತೆಗೆ ಕೆಲ ಪೊಲೀಸ್ ಅಧಿಕಾರಿಗಳ ಪಾತ್ರವೂ ಇದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಯ ವೇಳೆ ಕೆಲವು ಪ್ರಮುಖ ಸಂಗತಿಗಳನ್ನು ಮುಚ್ಚಿಡಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ತನಿಖಾ ತಂಡದ ಮೇಲೆಯೂ ಪ್ರಶ್ನೆ ಎತ್ತಿರುವ ಅವರು, ಕೆಲವು ಪೊಲೀಸ್ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡದೇ ರಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರದೋಶ್ ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿಯಾಗಿ ನಿಜಾಂಶಗಳನ್ನು ಬಹಿರಂಗಪಡಿಸಿದರೆ ಪ್ರಕರಣದ ಹಲವು ಹೊಸ ಆಯಾಮಗಳು ಬೆಳಕಿಗೆ ಬರಬಹುದು ಎಂದು ಅವರು ಹೇಳಿದ್ದಾರೆ.

ಇದೀಗ ಪ್ರದೋಶ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿ ನ್ಯಾಯಾಲಯದ ಪರಿಶೀಲನೆಯಲ್ಲಿದ್ದು, ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸುತ್ತದೆಯೇ, ತನಿಖಾ ಸಂಸ್ಥೆ ಯಾವ ನಿಲುವು ತಾಳಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಸೂಚನೆ: ಮೇಲಿನ ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪಗಳಾಗಿದ್ದು, ಅವು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.











