ಚಿತ್ರದುರ್ಗ, ಆ.06: ಚಳ್ಳಕೆರೆ ತಾಲ್ಲೂಕಿನಲ್ಲಿ ಮುಂಗಾರು ಮಳೆ ಅಭಾವದಿಂದಾಗಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಗುರುವಾರ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಕಾಪರಹಳ್ಳಿ ಮತ್ತು ಹೊಟ್ಟೆಪ್ಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದರ ಅವರು, ನಿನ್ನೆಯಿಂದಲೇ ಜಿಲ್ಲೆಯ ಗಡಿ ಭಾಗವಾದ ಹಿರಿಯೂರು ತಾಲ್ಲೂಕಿನ ಜೌಗೊಂಡನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಜಮೀನುಗಳ ಸ್ಥಿತಿಗತಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಲಾಗಿತ್ತು. ಗುರುವಾರ ಚಳ್ಳಕೆರೆ ತಾಲ್ಲೂಕಿನ ಪ್ರಸ್ತುತ ಬರ ಪರಿಸ್ಥಿತಿಯ ಸಮಗ್ರ ಮಾಹಿತಿಯನ್ನು ಜಂಟಿ ಕೃಷಿ ಹಾಗೂ ತೋಟಗಾರಿಕೆ ನಿರ್ದೇಶಕರಿಂದ ಪಡೆದುಕೊಳ್ಳುತ್ತಿದ್ದೇನೆ ಎಂದರು.
ಕಾಪರಹಳ್ಳಿ ಗ್ರಾಮದ ಚಿತ್ತಯ್ಯ ಅವರ ಜಮೀನಿಗೆ ಭೇಟಿ ನಷ್ಟಗೊಂಡ ಅಡಿಕೆ ಬೆಳೆ ವೀಕ್ಷಣೆ ನಡೆಸಿದ ಅವರು, ನಾಲ್ಕೈದು ವರ್ಷಗಳಿಂದ ಸಾಣಿಕೆರೆ ಕೆರೆಯ ನೀರಿನ ಆಸರೆಯಿಂದ ಚೆನ್ನಾಗಿ ಬೆಳೆದಿದ್ದ ಅಡಿಕೆ ಹಾಗೂ ತೆಂಗಿನ ತೋಟಗಳು ಮಳೆಯಿಲ್ಲದೆ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಒಣಗಿ ಹೋಗಿ ಅಡಿಕೆ ಮರಗಳನ್ನು ರೈತರು ತೆರವುಗೊಳಿಸುತ್ತಿದ್ದಾರೆ. ಇವರಿಗೆ ತೋಟಗಾರಿಕೆ ಇಲಾಖೆಯಿಂದ ನಿಯಮಾನುಸಾರ ಸೂಕ್ತ ಪರಿಹಾರ, ಹಾಗೂ ಅಡಕೆ ಬೆಳೆ ಬದಲಿಗೆ ತೆಂಗು ವಿಸ್ತರಣೆಗೆ ನೆರವು ಒದಗಿಸುವಂತೆ ಸ್ಥಳದಲ್ಲಿದ್ದ ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ ಅವರಿಗೆ ಸೂಚನೆ ನೀಡಿದರು.

ಶೇ 25ರಷ್ಟು ‘ಫಸಲ್ ಭೀಮಾ’ ಪರಿಹಾರ
ನಂತರ ಹೊಟ್ಟೆಪ್ಪನಹಳ್ಳಿ ಗ್ರಾಮದ ರೈತ ಕುಮಾರಸ್ವಾಮಿ ಎಂಬುವರ ಜಮೀನಿಗೆ ಭೇಟಿ ನೀಡಿ, ಕೇವಲ ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಶೇಂಗಾ, ತೊಗರಿ ಹಾಗೂ ಮೆಕ್ಕೆಜೋಳ ಬೆಳೆಗಳ ಸ್ಥಿತಿಯನ್ನು ಸಚಿವ ಟಿ.ರಘುಮೂರ್ತಿ ವೀಕ್ಷಿಸಿದರು.

ಸದ್ಯ ಇಡೀ ಜಿಲ್ಲೆಯಲ್ಲಿ ಶೇ 18 ರಿಂದ 20 ರಷ್ಟು ಮಾತ್ರ ಬಿತ್ತನೆಯಾಗಿದ್ದರೆ, ಚಳ್ಳಕೆರೆ ತಾಲ್ಲೂಕಿನಲ್ಲಿ ಕೇವಲ ಶೇ 16 ರಷ್ಟು ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ ಮುಂಗಾರು ಹಂಗಾಮ ಸಂಪೂರ್ಣ ವಿಫಲಗೊಳ್ಳುವ ಭೀತಿ ಎದುರಾಗಿದೆ ಎಂದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಶೇ.25ಕ್ಕಿಂತ ಕಡಿಮೆ ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ‘ಪ್ರಿವೆಂಟಿವ್ ಸೋಯಿಂಗ್’ ನಿಯಮದಡಿ ರೈತರಿಗೆ ರಕ್ಷಣೆ ಸಿಗಲಿದೆ. ಬೆಳೆ ವಿಮೆ ನೋಂದಣಿ ಮಾಡಿಸಿದ ಕೃಷಿಕರು ಹಾಗೂ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೂ ಸಹ ವಿಮಾ ಮೊತ್ತದಲ್ಲಿ ಶೇ 25 ರಷ್ಟು ಪರಿಹಾರ ಹಣ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ರಾಗಿ ಬೆಳೆ ವಿಮೆ ನೊಂದಣಿಗೆ ಕರೆ:
ಜಿಲ್ಲೆಯಲ್ಲಿ ಅಧಿಸೂಚಿಸಿದ ಬೆಳೆಗಳ ಪೈಕಿ ರಾಗಿ ಬೆಳೆಗೆ ಮಾತ್ರ ಆಗಸ್ಟ್ 14ರ ವರೆಗೆ ಬೆಳೆ ವಿಮೆ ನೊಂದಣಿಗೆ ಅವಕಾಶವಿದೆ. ತಾಲ್ಲೂಕಿನ ನಾಯಕನ ಹಟ್ಟಿ ಸೇರಿದಂತೆ, ಬೆಳೆ ವಿಮೆ ಮಾಡಿಸದ ಜಿಲ್ಲೆಯ ಎಲ್ಲಾ ರೈತರು ರಾಗಿ ಬೆಳೆಗೆ ವಿಮಾ ನೊಂದಣಿ ಮಾಡಿಸುವಂತೆ ಸಚಿವ ಟಿ.ರಘಮೂರ್ತಿ ಮನವಿ ಮಾಡಿದರು.
ರಾಗಿ ಬೆಳೆ ವಿಮೆಗೆ ರೈತರ ವಂತಿಕೆ ರೂ.318 ಗಳಾಗಿದ್ದು,ವಿಮೆ ಮಾಡಿಸಿದ ರೈತರಿಗೆ ಬಿತ್ತನೆ ವೈಫಲ್ಯದಡಿ ರೂ.3500 ರಿಂದ ರೂ.4000 ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ರಾಮಪ್ಪ, ಉಪವಿಭಾಗಾಧಿಕಾರಿ ಜೆ.ಕಾಂತರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ, ತಹಶಿಲ್ದಾರ ರಹೆಮಾನ್ ಪಾಷ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.












