Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಗಸ್ಟ್ 2 ರಂದು ಪೊಲೀಸ್ ಕಾನ್‍ಸ್ಟೇಬಲ್ ನೇಮಕಾತಿ ಪರೀಕ್ಷೆ : ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ

---Advertisement---

ಚಿತ್ರದುರ್ಗ. ಜುಲೈ30: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಆಗಸ್ಟ್ 2 ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9,592 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಲಿದ್ದಾರೆ. ದೂರುಗಳಿಗೆ ಆಸ್ಪದ ನೀಡದಂತೆ, ಅಧಿಕಾರಿಗಳು ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ಕಾರ್ಯ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚಿಸಿದರು.

 

ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೂಕ್ತ ಭದ್ರತೆ ಮತ್ತು ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕು. ಎಲ್ಲಾದರೂ ಕಾಂಪೌಂಡ್ ಅಥವಾ ಗೋಡೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದರೆ, ಅಂತಹ ಸ್ಥಳಗಳಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಅಗತ್ಯ ತಡೆಗೋಡೆಗಳನ್ನು ನಿರ್ಮಿಸಿ ಸುರಕ್ಷತೆ ಖಾತ್ರಿಪಡಿಸಿಕೊಳ್ಳಬೇಕು. ಅಗತ್ಯ ಬಿದ್ದರೆ, ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನೇಮಿಸಬೇಕು. ಪ್ರಶ್ನೆ ಪತ್ರಿಕೆಗಳ ಭದ್ರತೆ ಹಾಗೂ ಪಾಲನೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಇದಲ್ಲದೆ ತಾಲೂಕು ಮಟ್ಟದಲ್ಲೂ ತಹಶೀಲ್ದಾರ್, ಬಿಇಒ ಹಾಗೂ ಪ್ರಾಂಶುಪಾಲರನ್ನೊಳಗೊಂಡ ಸಮಿತಿಗಳನ್ನು ನೇಮಿಸಲಾಗಿದ್ದು, ಅವರಿಗೆ ನೀಡಲಾಗಿರುವ ಕರ್ತವ್ಯದ ಮಾರ್ಗದರ್ಶಿ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಕಡ್ಡಾಯವಾಗಿದ್ದು, ಡಿಡಿಪಿಐ ಅವರು ಈ ಬಗ್ಗೆ ನಿಗಾವಹಿಸಬೇಕು. ರೈಲ್ವೇ ಗೇಟ್ ಅಥವಾ ಟ್ರಾಫಿಕ್ ಸಮಸ್ಯೆ ಇರುವ ಮಾರ್ಗಗಳಲ್ಲಿ ಪ್ರಶ್ನೆ ಪತ್ರಿಕೆ ಸಾಗಿಸುವಾಗ ವಿಳಂಬವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಪರೀಕ್ಷಾ ಕೇಂದ್ರಗಳ ಸುತ್ತಲೂ ಸೂಕ್ತ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಪ್ರಶ್ನೆ ಪತ್ರಿಕೆ ಸಾಗಿಸುವ ಪ್ರತಿ ಮಾರ್ಗದ ವಾಹನಕ್ಕೂ ಸಶಸ್ತ್ರ ಪೆÇಲೀಸ್ ಸಿಬ್ಬಂದಿಯ ಭದ್ರತೆ ಒದಗಿಸಬೇಕು ಎಂದರು.

ಕೊಠಡಿ ಸಿದ್ಧತೆ ಮತ್ತು ಪರಿಶೀಲನೆ: ಪರೀಕ್ಷಾ ಕೊಠಡಿಗಳ ಸಿದ್ಧತೆ, ಕೊಠಡಿ ಮೇಲ್ವಿಚಾರಕರ ನಿಯೋಜನೆ ಮತ್ತು ಅವರಿಗೆ ಅಗತ್ಯ ತರಬೇತಿ ನೀಡುವ ಬಗ್ಗೆ ಕಚೇರಿ ಮುಖ್ಯಸ್ಥರು ಗಮನಹರಿಸಬೇಕು. ಪರೀಕ್ಷಾ ಸಿಬ್ಬಂದಿಗೆ ವಹಿಸಲಾದ ಜವಾಬ್ದಾರಿಯನ್ನು ಅಧಿಕಾರಿಗಳು ಖುದ್ದಾಗಿ ಸ್ಥಳದಲ್ಲೇ ಪರಿಶೀಲಿಸಿ ದೃಢೀಕರಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಸಹ ಮುಖ್ಯ ವೀಕ್ಷಕರು ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಕೇಂದ್ರದಲ್ಲಿ ಹಾಜರಿರಬೇಕು. ಪ್ರಶ್ನೆ ಪತ್ರಿಕೆ ವಿತರಣೆ ಸೇರಿದಂತೆ ಪರೀಕ್ಷೆಯ ಪ್ರತಿಯೊಂದು ಪ್ರಕ್ರಿಯೆಯೂ ಸಿಸಿಟಿವಿ ಕಣ್ಗಾವಲಿನಲ್ಲಿಯೇ ನಡೆಯಬೇಕು. ಜಿಲ್ಲಾ ಮಟ್ಟದಲ್ಲಿ ವಿಶೇಷ ತಂಡವು ಈ ದೃಶ್ಯಾವಳಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದೆ. ಪರೀಕ್ಷೆ ಆರಂಭವಾದ ತಕ್ಷಣ ಗೈರುಹಾಜರಾದ ವಿದ್ಯಾರ್ಥಿಗಳ ವಿವರಗಳನ್ನು ಆನ್‍ಲೈನ್ ಮೂಲಕ ತಕ್ಷಣವೇ ಅಪ್‍ಲೋಡ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ:
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಹೊರಡಿಸಿರುವ ನಿಷೇಧಿತ ವಸ್ತುಗಳು ಮತ್ತು ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಅಭ್ಯರ್ಥಿಗಳು ಕಟ್ಟುನಿಟ್ಟಾದ ಮತ್ತು ಕಡ್ಡಾಯ ಭದ್ರತಾ ತಪಾಸಣೆ ನಡೆಸಲಾಗುತ್ತದೆ. ಇದಕ್ಕೆ ಅನುವಾಗುವಂತೆ ಪರೀಕ್ಷೆ ಸಮಯಕ್ಕಿಂತ 2:30 ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಕೇಂದ್ರಗಳಿಗೆ ಆಗಮಿಸಬೇಕು. ಸಿಸಿಟಿವಿ ಕಣ್ಗಾವಲು ಮತ್ತು ಎಐ ಆಧಾರಿತ ಮುಖ ಚಹರೆ ಗುರುತಿಸುವಿಕೆ ಸೇರಿದಂತೆ ಬಹು ಗುರುತಿನ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತದೆ.

ಯಾವುದೇ ರೀತಿಯ ಪಠ್ಯ ಸಾಮಗ್ರಿಗಳು, ಚೀಟಿಗಳು, ಜಾಮಿಟ್ರಿ, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಪೆನ್‍ಡ್ರೈವ್‍ಗಳು, ಎರೆಸೇರ್, ಲಾಗ್ ಟೇಬಲ್ ಸೇರಿದಂತೆ ಎಲೆಕ್ಟ್ರಾನಿಕ್ ಪೆನ್ ಸ್ಕ್ಯಾನರ್, ವಾಲೆಟ್, ಗಾಗಲ್ಸ್, ಕೈ ಚೀಲಗಳು, ಬೆಲ್ಟ್, ಮೈಕ್ರೋಚಿಪ್, ಕ್ಯಾಮೆರಾ, ಬ್ಲೂಟೂತ್ ಸಾಧನ, ಮುಂತಾದ ಸಂವಹನ ಸಾಧನಗಳನ್ನು ಮರೆಮಾಡುವ ಮೂಲಕ ನ್ಯಾಯೋಚಿತವಲ್ಲದ ವಿಧಾನಗಳಿಗೆ ಬಳಸಬಹುದಾದ ಇತರೆ ವಸ್ತುಗಳು, ಮೊಬೈಲ್, ಬ್ಲೂಟೂತ್, ಇಯರ್ ಪೋನ್, ಮೈಕ್ರೋಫೋನ್, ಪೇಜರ್ ಸೇರಿದಂತೆ ಆಧುನಿಕ ಸಂವಹನ ಸಾಧನಗಳು, ಯಾವುದೇ ರೀತಿಯ ಗಡಿಯಾರ, ಕೈ ಗಡಿಯಾರ, ಬಳೆ, ಕ್ಯಾಮರಾ, ತೆರೆದಿರುವ ಅಥವಾ ಪ್ಯಾಕ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು, ನೀರಿನ್ ಬಾಟೆಲ್ ನಿಷೇಧಿತ ವಸ್ತುಗಳಾಗಿವೆ.

ಅಭ್ಯರ್ಥಿಗಳು ಉದ್ದ ತೋಳಿನ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ಅರ್ಧ ತೋಳಿನ ಬಟ್ಟೆಗಳನ್ನು ಮಾತ್ರ ಧರಿಸಿರಬೇಕು. ಶಿರೋವಸ್ತ್ರ ಹಾಗೂ ಮುಖ ಮುಚ್ಚುವ ಉಡುಪುಗಳು, ಟೋಪಿ ಅಥವಾ ಯಾವುದೇ ರೀತಿಯ ತಲೆ ಹೊದಿಕೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ. ಯಾವುದೇ ರೀತಿಯ ಲೋಹದ ವಸ್ತುಗಳು ಅಥವಾ ಆಭರಣಗಳನ್ನು ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಮೂಗುತಿ ಮತ್ತು ಮಂಗಳಸೂತ್ರಕ್ಕೆ ಮಾತ್ರ ವಿನಾಯಿತಿ ನೀಡಲಾಗಿದೆ. ಶೂ ಧರಿಸುವುದಕ್ಕೆ ಅವಕಾಶವಿರುವುದಿಲ್ಲ. ತೆಳುವಾದ ಅಡಿಭಾಗವಿರುವ ಸ್ಯಾಂಡಲ್ಸ್ ಅಥವಾ ಚಪ್ಪಲಿಗಳನ್ನು ಮಾತ್ರ ಧರಿಸಬೇಕು.

ಶ್ರವಣ ಸಾಧನಗಳು ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಬಳಸುವ ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್ಲಿ ಯುಡಿಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಶ್ರವಣ ಸಾಧನ ಅಥವಾ ಕಾಕ್ಲಿಯರ್ ಇಂಪ್‍ಲಾಂಟ್ ಸಾಧನಗಳೊಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಇದರೊಂದಿಗೆ ಯಾವುದಾದರೂ ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಛಿಸುವವರು ಪರೀಕ್ಷೆ ಆರಂಭಕ್ಕೆ 2 ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು. ಅವರನ್ನು ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಆದರೆ ಜನಿವಾರ, ಶಿವದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಅಭ್ಯರ್ಥಿಗಳಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷೆಯ ದಿನದಂದು ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಬಂದೋಬಸ್ತ್ ಮತ್ತು ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.

ಮಾರ್ಗದರ್ಶನ ಹಾಗೂ ಚಾರ್ಟ್ ಪ್ರದರ್ಶನ: ಪರೀಕ್ಷಾರ್ಥಿಗಳು ಸುಲಭವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಅನುಕೂಲವಾಗುವಂತೆ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್‍ಗಳಲ್ಲಿ ಪರೀಕ್ಷಾ ಕೇಂದ್ರಗಳ ವಿವರವಿರುವ ಚಾರ್ಟ್‍ಗಳನ್ನು ಪ್ರದರ್ಶಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ತುರ್ತು ಚಿಕಿತ್ಸೆಗಾಗಿ ಅಗತ್ಯ ಸಿಬ್ಬಂದಿ, ಪ್ರಥಮ ಚಿಕಿತ್ಸಾ ಕಿಟ್, ಒಆರ್‍ಎಸ್ ಹಾಗೂ ಅಗತ್ಯ ವೈದ್ಯಕೀಯ ವ್ಯವಸ್ಥೆ ಇರಬೇಕು. ಅಲ್ಲದೆ, ತಕ್ಷಣದ ತುರ್ತು ಸೇವೆಗೆ ಆಂಬುಲೆನ್ಸ್ ಹಾಗೂ ವೈದ್ಯರ ತಂಡ ಸಿದ್ಧವಿರಬೇಕು. ಪರೀಕ್ಷೆ ನಡೆಯುವ ಸಮಯದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ವೀಡಿಯೋ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಪರೀಕ್ಷಾ ಕೇಂದ್ರಗಳ ಒಳಗೆ ಮಾಧ್ಯಮದವರಿಗೆ ಪ್ರವೇಶವಿಲ್ಲ. ಪರೀಕ್ಷಾ ಕೇಂದ್ರ ಹೊರಗಡೆಯೇ ಅಭ್ಯರ್ಥಿಗಳು ಪ್ರವೇಶಿಸುವುದನ್ನು ವೀಡಿಯೋ ಮಾಡಿ ಸುದ್ದಿ ಬಿತ್ತರಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಅಗತ್ಯ ಉಸ್ತುವಾರಿ ಹಾಗೂ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೆ.ಇ.ಎ ನೀಡಿರುವ ಮಿನಿಟ್ ಟು ಮಿನಿಟ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು.  ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ತಪಾಸಣೆಗಾಗಿ ವಿಶೇಷ ಕೊಠಡಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರು ಮಾತ್ರ ಕಾರ್ಯನಿರ್ವಹಿಸಲಿದ್ದು, ಪೆÇಲೀಸ್ ಸಿಬ್ಬಂದಿಗೆ ಕೊಠಡಿಯೊಳಗೆ ಪ್ರವೇಶವಿರುವುದಿಲ್ಲ. ಮೇಲ್ವಿಚಾರಣೆ ನಡೆಸುವ ಡಿ.ಎಸ್.ಪಿ ಹಂತದ ಅಧಿಕಾರಿಗಳನ್ನು ಹೊರತುಪಡಿಸಿ, ಇತರ ಯಾವ ಅಧಿಕಾರಿಗಳಿಗೂ ಕೊಠಡಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಲ್ಲಿ ಯಾರಾದರೂ ಪೆÇಲೀಸ್ ಅಥವಾ ಇತರ ನಿಯೋಜಿತ ಸಿಬ್ಬಂದಿಯ ಸಂಬಂಧಿಕರಿದ್ದರೆ, ಅದನ್ನು ಸಿಬ್ಬಂದಿಯು ಮುಂಚಿತವಾಗಿಯೇ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಇಂತಹ ಕಡೆಗಳಲ್ಲಿ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಪಿ.ಯು. ಉಪನಿರ್ದೇಶಕ ಶಶಿಧರ್.ಎಸ್.ವಿ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯಕ್, ಖಜಾನೆ ಇಲಾಖೆ ಉಪನಿರ್ದೇಶಕ ಹೆಚ್.ಟಿ.ಅಶೋಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕಮಾರ್, ಲೋಕೋಯೋಗಿ ಇಲಾಖೆ ಕಾರ್ಯಪಾಲಕ ಇಂಜಿಯರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಮಾರ್ಗಧಿಕಾರಿಗಳು, ವಸ್ತ್ರಸಂಹಿತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now