ದೆಹಲಿ.ಜುಲೈ.30: ದೇಶದ ಪ್ರತಿಯೊಂದು ಮನೆಯಲ್ಲೂ ಎಲ್‍ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಸುವುದು ಅನಿವಾರ್ಯವಾಗಿದೆ. ಹೀಗಾಗಿ ಗ್ಯಾಸ್ ನಿಯಮಗಳಲ್ಲಿ ಸಣ್ಣ ಬದಲಾವಣೆಯಾದರೂ ಅದು ಕೋಟ್ಯಂತರ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಸಾರಿಗೆ ಅಡಚಣೆಯಿಂದಾಗಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ಈ ನಡುವೆ, ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಕೆಲ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ.
ಗ್ಯಾಸ್ ದರ ಏರಿಕೆಯಾಗುತ್ತಾ?
ಪ್ರತಿ ತಿಂಗಳ 1ರಂದು ತೈಲ ಕಂಪನಿಗಳು (ಇಂಡೇನ್, ಹೆಚ್‌ಪಿ, ಭಾರತ್ ಗ್ಯಾಸ್) ಹೊಸ ಗ್ಯಾಸ್ ದರಗಳನ್ನು ಘೋಷಿಸುತ್ತವೆ. ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಜುಲೈ ತಿಂಗಳಿನಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಗಲ್ಫ್ ದೇಶಗಳಲ್ಲಿನ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವು ಗ್ಯಾಸ್ ರವಾನೆಗೆ ಅಡ್ಡಿಯುಂಟುಮಾಡಿದೆ. ಜುಲೈನಲ್ಲಿ ವಾಣಿಜ್ಯ (Commercial) ಸಿಲಿಂಡರ್ ಬೆಲೆ ತಗ್ಗಿಸಿದ್ದ ಸರ್ಕಾರ, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ, ಕಚ್ಚಾ ತೈಲದ ಬೆಲೆ ಹೆಚ್ಚಿರುವುದರಿಂದ ಆಗಸ್ಟ್ 1ರಿಂದ ಗ್ಯಾಸ್ ದರ ಏರಿಕೆಯಾಗುವ ಸಾಧ್ಯತೆಯಿದೆ.
ಸಬ್ಸಿಡಿಯಲ್ಲಿ ಕಡಿತ
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಪ್ರತಿ ಸಿಲಿಂಡರ್ ಮೇಲೆಯೂ ₹300 ಸಬ್ಸಿಡಿ ನೀಡುತ್ತಿದೆ.
ಹೊಸ ನಿಯಮ: ಈ ಹಿಂದೆ ವರ್ಷಕ್ಕೆ 6 ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಮಿತಿಯನ್ನು ಈಗ 4 ಸಿಲಿಂಡರ್‌ಗಳಿಗೆ ಕಡಿತಗೊಳಿಸಲಾಗಿದೆ.

ವರ್ಷದಲ್ಲಿ 4 ಸಿಲಿಂಡರ್‌ಗಳಿಗಿಂತ ಹೆಚ್ಚು ಬುಕ್ ಮಾಡಿದರೆ ಸಬ್ಸಿಡಿ ಹಣ ದೊರೆಯುವುದಿಲ್ಲ. ಈ ನಿಯಮ ಆಗಸ್ಟ್‌ನಲ್ಲೂ ಮುಂದುವರಿಯಲಿದೆ.
‘ಒಂದು ಕುಟುಂಬ, ಒಂದೇ ಕನೆಕ್ಷನ್’ – PNG ನಿಯಮ
ನಿಮ್ಮ ಪ್ರದೇಶದಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯ ಲಭ್ಯವಿದ್ದರೆ, ಗ್ರಾಹಕರು LPG ಯಿಂದ PNG ಗೆ ಬದಲಾಗುವುದು ಕಡ್ಡಾಯವಾಗಿದೆ.
ಸರ್ಕಾರ ಜಾರಿಗೆ ತಂದಿರುವ ‘ಒಂದು ಕುಟುಂಬಕ್ಕೆ ಒಂದೇ ಗ್ಯಾಸ್ ಕನೆಕ್ಷನ್’ ನಿಯಮದಂತೆ, ಒಬ್ಬ ವ್ಯಕ್ತಿ ಅಥವಾ ಕುಟುಂಬವು LPG ಮತ್ತು PNG ಎರಡನ್ನೂ ಒಟ್ಟಿಗೆ ಹೊಂದುವಂತಿಲ್ಲ.
ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಿದ್ದು, ಈ ನಿಯಮವೂ ಆಗಸ್ಟ್‌ನಲ್ಲಿಯೂ ಕಟ್ಟುನಿಟ್ಟಾಗಿ ಮುಂದುವರಿಯಲಿದೆ.










