ದೆಹಲಿ.ಜುಲೈ.30: ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ದೈನಂದಿನ ಜೀವನದಲ್ಲಿ ಲಿಫ್ಟ್ (ಎಲಿವೇಟರ್) ಬಳಕೆಯು ಅತ್ಯಂತ ಸಾಮಾನ್ಯವಾಗಿದೆ. ಕಟ್ಟಡದ ಕೆಳಗಿನಿಂದ ಮೇಲಕ್ಕೆ ಹಾಗೂ ಮೇಲಿಂದ ಕೆಳಗೆ ಸಾಗಲು ಕ್ಷಣಾರ್ಧದಲ್ಲಿ ನೆರವಾಗುವ ಲಿಫ್ಟ್‌ಗಳನ್ನು ಜನರು ಕಣ್ಣು ಮುಚ್ಚಿ ನಂಬುತ್ತಾರೆ. ಆದರೆ, ಅದೇ ಲಿಫ್ಟ್‌ನಲ್ಲಿ ಅನಾಹುತ ಅಥವಾ ಅಪಘಾತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಸಂತ್ರಸ್ತರಿಗೆ ನ್ಯಾಯ ಸಿಗುವುದು ಹೇಗೆ? ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿದೆ.
ಲಿಫ್ಟ್ ಅಪಘಾತಗಳು ಸಂಭವಿಸಿದರೆ ಕೇವಲ ಒಬ್ಬರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಬದಲಾಗಿ ಲಿಫ್ಟ್ ತಯಾರಿಕಾ ಸಂಸ್ಥೆ, ನಿರ್ವಹಣಾ ಏಜೆನ್ಸಿ (ಮೆಂಟೆನೆನ್ಸ್) ಮತ್ತು ಆ ಕಟ್ಟಡದ ಮಾಲೀಕರು — ಈ ಮೂವರೂ ಜಂಟಿಯಾಗಿ ಅಪಘಾತದ ಹೊಣೆ ಹೊರಬೇಕಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು ಲಿಫ್ಟ್ ಅನ್ನು ಒಂದು ‘ಸಾಮಾನ್ಯ ಸಾರಿಗೆ ವ್ಯವಸ್ಥೆ’ (Common Carrier) ಎಂದು ಪರಿಗಣಿಸಬೇಕು. ಸಾರ್ವಜನಿಕರು ಲಿಫ್ಟ್ ಹತ್ತಿ ಬಾಗಿಲು ಮುಚ್ಚಿಕೊಂಡ ತಕ್ಷಣ, ತಮ್ಮ ಪ್ರಾಣ ಮತ್ತು ರಕ್ಷಣೆಯನ್ನು ಸಂಪೂರ್ಣವಾಗಿ ಆ ಯಾಂತ್ರಿಕ ವ್ಯವಸ್ಥೆಯ ಕೈಯಲ್ಲೇ ಒಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಲಿಫ್ಟ್ ತಯಾರಿಸಿದ ಕಂಪನಿ, ಅದನ್ನು ನಿರ್ವಹಿಸುವ ಏಜೆನ್ಸಿ ಮತ್ತು ಕಟ್ಟಡದ ಮಾಲೀಕರ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

2003ರಲ್ಲಿ ಕೇಂದ್ರ ಸರ್ಕಾರದ ‘ರಾ’ (R&AW) ಪ್ರಧಾನ ಕಚೇರಿಯಲ್ಲಿ ನಡೆದ ದೂಂತಕಾರಿ ಅಪಘಾತಕ್ಕೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ. ಆ ಅಪಘಾತದಲ್ಲಿ ಮಾಜಿ ರಾಜತಾಂತ್ರಿಕ ಅಧಿಕಾರಿ ವಿಪಿನ್ ಹಂಡಾ ಅವರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರು. ಲಿಫ್ಟ್ 6 ಮತ್ತು 7ನೇ ಮಹಡಿಯ ನಡುವೆ ಸಿಲುಕಿಕೊಂಡಾಗ, ರಕ್ಷಣಾ ಕಾರ್ಯಾಚರಣೆ ವೇಳೆ ವಿಪಿನ್ ಹೊರಬರಲು ಯತ್ನಿಸಿದಾಗ ಲಿಫ್ಟ್ ಏಕಾಏಕಿ ಕೆಳಗೆ ಜಾರಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (NCDRC) 2014ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪ್ರಸಿದ್ಧ ‘ಓಟಿಸ್ ಎಲಿವೇಟರ್ ಕಂಪನಿ’ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಓಟಿಸ್ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಹಂಡಾ ಅವರ ಕುಟುಂಬಕ್ಕೆ ಶೇ. 9ರಷ್ಟು ಬಡ್ಡಿಯೊಂದಿಗೆ ರೂ. 3.01 ಕೋಟಿ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ವಿಚಾರಣೆ ವೇಳೆ “ಮಾನವ ಸಹಜ ತಪ್ಪು ಅಥವಾ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ” ಎಂಬ ಓಟಿಸ್ ಕಂಪನಿಯ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಆ ಲಿಫ್ಟ್‌ನಲ್ಲಿ ದೀರ್ಘಕಾಲದಿಂದ ತಾಂತ್ರಿಕ ದೋಷಗಳಿವೆ ಎಂದು ತಿಳಿದಿದ್ದರೂ ಕಂಪನಿಯು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇದರೊಂದಿಗೆ, ಸರಿಯಾದ ಮೇಲ್ವಿಚಾರಣೆ ನಡೆಸದ ‘ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್’ (MES) ಮತ್ತು ದೂರುಗಳು ಬಂದರೂ ನಿರ್ಲಕ್ಷಿಸಿದ ಸರ್ಕಾರಿ ಇಲಾಖೆಯೂ ಈ ತಪ್ಪಿನಲ್ಲಿ ಭಾಗಿಯಾಗಿದೆ ಎಂದು ಕೋರ್ಟ್ ತೀರ್ಮಾನಿಸಿದೆ.
ಒಟ್ಟು ನಷ್ಟಪರಿಹಾರದ ಮೊತ್ತದಲ್ಲಿಶೇ. 70 ಭಾಗವನ್ನು ಓಟಿಸ್ ಕಂಪನಿ, ಶೇ. 25 ಭಾಗವನ್ನು MES ಸಂಸ್ಥೆ, ಮತ್ತುಶೇ. 5 ಭಾಗವನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ವಿಂಗಡಿಸಿದೆ. ಅಪಘಾತ ಸಂಭವಿಸಿದಾಗ ಸಂತ್ರಸ್ತರು ಪ್ರತಿಯೊಬ್ಬರ ತಪ್ಪು ಎಷ್ಟಿದೆ ಎಂದು ಹುಡುಕಿಕೊಂಡು ಅಲೆಯಲು ಸಾಧ್ಯವಿಲ್ಲ. ತಪ್ಪಿತಸ್ಥರಿಂದ ಸಂಪೂರ್ಣ ನಷ್ಟಪರಿಹಾರ ಪಡೆಯುವ ಹಕ್ಕು ಅವರಿಗೆ ಇದೆ ಎಂದು ಅತ್ಯುನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










