ಬೆಂಗಳೂರು.ಜುಲೈ.29: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ ಹಾಗೂ ಬರ (Drought) ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾದ್ಯಂತ ಬರ ಅಧ್ಯಯನಕ್ಕೆ ಮುಂದಾಗಿದೆ. ಇದರ ಭಾಗವಾಗಿ ಇಂದು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಬಿಜೆಪಿ ಅಧ್ಯಯನ ನಿಯೋಗವು ಕನಕಪುರ ತಾಲೂಕಿನಲ್ಲಿ ವಿಸ್ತೃತ ಪರಿಶೀಲನೆ ನಡೆಸಿತು.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಹೊನಗನಹಳ್ಳಿ ಕೆರೆ ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿಗೆ ಖುದ್ದಾಗಿ ಭೇಟಿ ನೀಡಿದ ನಾಯಕರ ತಂಡ, ಒಣಗುತ್ತಿರುವ ಬೆಳೆಗಳು ಮತ್ತು ಹಾನಿಯ ನೈಜ ಸ್ಥಿತಿಗತಿಯನ್ನು ಪರಿಶೀಲಿಸಿತು. ಈ ವೇಳೆ ಸ್ಥಳೀಯ ರೈತರನ್ನು ಭೇಟಿ ಮಾಡಿ, ಮಳೆ ಅಭಾವದಿಂದ ಎದುರಾಗಿರುವ ಬೆಳೆ ನಷ್ಟ, ನೀರಾವರಿ ಹಾಗೂ ಮೇವಿನ ಸಮಸ್ಯೆಗಳ ಕುರಿತು ಚರ್ಚಿಸಿ ಮಾಹಿತಿ ಸಂಗ್ರಹಿಸಿತು. ರಾಜ್ಯ ಸರ್ಕಾರವು ಬರ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಮತ್ತು ಸಂಕಷ್ಟದಲ್ಲಿರುವ ಬೆಳೆಗಾರರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್, ಶಾಸಕರಾದ ಟಿ. ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ರಾಮನಗರ ಜಿಲ್ಲಾಧ್ಯಕ್ಷರಾದ ಆನಂದ್ ಸ್ವಾಮಿ, ಪದಾಧಿಕಾರಿಗಳು, ಪ್ರಮುಖರು, ರೈತ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.









