ದೆಹಲಿ.ಜುಲೈ.29: ಸಾಮಾನ್ಯ ನಾಗರಿಕರನ್ನು ಹೆದರಿಸಿ ಹಣ ದೋಚುವ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಸೈಬರ್ ವಂಚನೆಗಳ ಪೈಕಿ ಡಿಜಿಟಲ್ ಅರೆಸ್ಟ್ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಇದನ್ನು ಅಪರಾಧ ಕಾನೂನಿನಡಿ ಪ್ರತ್ಯೇಕ ಅಪರಾಧ ಎಂದು ಮಾನ್ಯ ಮಾಡಿ, ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಕುರಿತು ವಿಚಾರಣೆ ನಡೆಸಿತು. ವಂಚಕರು ಪೋಲಿಸರು, ನ್ಯಾಯಾಧೀಶರು ಅಥವಾ ಸರ್ಕಾರಿ ಅಧಿಕಾರಿಗಳಂತೆ ನಟಿಸಿ, ವೀಡಿಯೊ ಕರೆಗಳ ಮೂಲಕ ಜನರಲ್ಲಿ ಭಯ ಹುಟ್ಟಿಸಿ ವರ್ಚುವಲ್ ಆಗಿ ಬಂಧನದಲ್ಲಿಡುವಂತಹ ಗಂಭೀರ ಪ್ರಕರಣಗಳ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು. ಇಂತಹ ಕೃತ್ಯಗಳು ಕೇವಲ ವಂಚನೆಯಷ್ಟೇ ಅಲ್ಲದೆ ಬಲವಂತದ ಸುಲಿಗೆ ಮತ್ತು ದರೋಡೆಯ ಗುಣಲಕ್ಷಣಗಳನ್ನು ಹೊಂದಿದ್ದು, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನ್ಯಾಯಪೀಠ ಪ್ರತಿಪಾದಿಸಿತು.
ಇದೇ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, ತಂತ್ರಜ್ಞಾನ ದುರ್ಬಳಕೆಯಿಂದ ಬೆಳೆಯುತ್ತಿರುವ ‘ಡೀಪ್‌ಫೇಕ್’ ತಂತ್ರಜ್ಞಾನದ ಅಪಾಯವನ್ನು ಉಲ್ಲೇಖಿಸಿದರು. ರೂಪಾಂತರಗೊಂಡ ನಕಲಿ ವೀಡಿಯೊ ಹಾಗೂ ಧ್ವನಿ ಬಳಸಿ ಸಾರ್ವಜನಿಕರನ್ನು ವಂಚಿಸುವ ಕೃತ್ಯಗಳಿಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಶಾಸನ ರಚನೆ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸೈಬರ್ ವಂಚನೆ ಮತ್ತು ಡಿಜಿಟಲ್ ಅರೆಸ್ಟ್ ತಡೆಯಲು ವಿವಿಧ ಸಚಿವಾಲಯಗಳ ಸಮಿತಿಯು ವರದಿ ಸಿದ್ಧಪಡಿಸುತ್ತಿದ್ದು, ಹೊಸ ಮಸೂದೆಯ ಕರಡನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದು ಕೋರ್ಟ್‌ಗೆ ತಿಳಿಸಿದರು. ದೆಹಲಿಯ 76 ವರ್ಷದ ವೃದ್ಧೆಯೊಬ್ಬರಿಂದ ಬರೋಬ್ಬರಿ 1.64 ಕೋಟಿ ರೂಪಾಯಿ ದೋಚಿದ ಪ್ರಕರಣ ಸೇರಿದಂತೆ 10 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸುಮಾರು 20 ಬೃಹತ್ ಡಿಜಿಟಲ್ ವಂಚನೆ ಪ್ರಕರಣಗಳನ್ನು ಸಿಬಿಐ ಪ್ರಸ್ತುತ ತನಿಖೆ ನಡೆಸುತ್ತಿರುವುದಾಗಿ ತಿಳಿಸಲಾಯಿತು.








