ನೆಲಮಂಗಲ: ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ರೈತರ ಬೆಳೆ ಚಿಂತೆ ನಡುವೆ ನೆಲಮಂಗಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಷ್ಟ್ರೀಯ ಪಕ್ಷಿ ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 300ಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿವೆ ಎಂಬ ಮಾಹಿತಿ ಹರಿದಾಡುತ್ತಿದ್ದರೂ, ಅರಣ್ಯ ಇಲಾಖೆ ಇನ್ನೂ ಅಧಿಕೃತ ಸಂಖ್ಯೆಯನ್ನು ಪ್ರಕಟಿಸಿಲ್ಲ.
ಕುದೂರು, ಮಲ್ಲಪ್ಪನಕಟ್ಟೆ, ಮಡಿವಾಳರಕಟ್ಟೆ ಹಾಗೂ ಮಾರಪ್ಪನಹಳ್ಳಿ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ನವಿಲುಗಳು ಸರಣಿ ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗಿವೆ. ಜಮೀನುಗಳ ಅಂಚಿನಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಜೀವವಿಲ್ಲದೆ ಬಿದ್ದಿರುವ ನವಿಲುಗಳ ದೃಶ್ಯ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸಾವಿಗೆ ಕಾರಣವೇನು?
ನವಿಲುಗಳ ಸಾವಿನ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತೀವ್ರ ಕೀಟನಾಶಕ ಮಿಶ್ರಿತ ಆಹಾರ ಅಥವಾ ನೀರು ಸೇವಿಸಿರುವುದರಿಂದ ಈ ಘಟನೆ ಸಂಭವಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನೀರಿನ ಕೊರತೆ, ಹಸಿವು, ಹಕ್ಕಿ ಜ್ವರ ಅಥವಾ ಇತರ ವೈರಸ್ ಸೋಂಕು ಕಾರಣವಾಗಿರಬಹುದೇ ಎಂಬ ಪ್ರಶ್ನೆಯೂ ಮೂಡಿದೆ. ಅಲ್ಲದೆ, ಮಾಂಸ ಹಾಗೂ ಗರಿಗಳಿಗಾಗಿ ಶಿಕಾರಿಗಳು ವಿಷಪ್ರಯೋಗ ನಡೆಸಿರುವ ಸಾಧ್ಯತೆಯನ್ನೂ ಸ್ಥಳೀಯರು ತಳ್ಳಿಹಾಕುತ್ತಿಲ್ಲ.ಆದರೆ ಈ ಎಲ್ಲ ಅನುಮಾನಗಳ ನಡುವೆಯೂ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ತನಿಖೆಯ ವರದಿ ಪ್ರಕಟವಾಗಿಲ್ಲ.
ವನ್ಯಜೀವಿಗಳ ಸಂರಕ್ಷಣೆ ಅರಣ್ಯ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದ್ದರೂ, ರಾಷ್ಟ್ರೀಯ ಪಕ್ಷಿಯ ಸರಣಿ ಸಾವಿನ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಸ್ಥಳೀಯರು ಮತ್ತು ರೈತ
ಸಂಘಟನೆಗಳು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿವೆ:
ಮೃತ ನವಿಲುಗಳ ಮಾದರಿಗಳನ್ನು ತಕ್ಷಣ ಪ್ರಯೋಗಾಲಯಕ್ಕೆ ಕಳುಹಿಸಿ ಸಾವಿನ ನಿಖರ ಕಾರಣ ಪತ್ತೆಹಚ್ಚಬೇಕು.
ಕುದೂರು, ಮಲ್ಲಪ್ಪನಕಟ್ಟೆ, ಮಡಿವಾಳರಕಟ್ಟೆ ಹಾಗೂ ಮಾರಪ್ಪನಹಳ್ಳಿ ಭಾಗಗಳಲ್ಲಿ ವಿಶೇಷ ಅರಣ್ಯ ಗಸ್ತು ನಿಯೋಜಿಸಬೇಕು.
ಶಿಕಾರಿ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
ಕಾಡಂಚಿನ ಪ್ರದೇಶಗಳಲ್ಲಿ ವನ್ಯಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ರೈತರಿಗೆ ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ಜಾಗೃತಿ ಮೂಡಿಸಬೇಕು.
ಈ ಹಿಂದೆ ತುಮಕೂರು ಹಾಗೂ ನೆಲಮಂಗಲ ಭಾಗಗಳಲ್ಲಿ ನವಿಲುಗಳ ಸಾವಿನ ಪ್ರಕರಣಗಳು ವರದಿಯಾಗಿದ್ದಾಗ, ಹಕ್ಕಿ ಜ್ವರವೇ ಕಾರಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಇದೇ ರೀತಿಯ ಕಾರಣ ಇಲ್ಲಿಯೂ ಇದೆಯೇ ಅಥವಾ ಬೇರೆ ಯಾವುದೇ ಅಂಶ ಕಾರಣವಾಗಿದೆಯೇ ಎಂಬುದು ತನಿಖೆಯ ಬಳಿಕವೇ ತಿಳಿಯಬೇಕಿದೆ.
ನೆಲಮಂಗಲ ವಲಯ ಅರಣ್ಯಾಧಿಕಾರಿ ಮಂಜುನಾಥ್ ಪ್ರತಿಕ್ರಿಯಿಸಿ, “ಕುದೂರು ವ್ಯಾಪ್ತಿಯಲ್ಲಿ ಎರಡು ನವಿಲುಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳುವಷ್ಟರಲ್ಲಿ ಮೃತದೇಹಗಳನ್ನು ನಾಯಿಗಳು ಹಾನಿಗೊಳಿಸಿದ್ದವು,” ಎಂದು ತಿಳಿಸಿದ್ದಾರೆ.
ಇದೇ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, “ನವಿಲುಗಳ ಸರಣಿ ಸಾವಿನ ಕುರಿತು ವಿಶೇಷ ತನಿಖಾ ತಂಡ ರಚಿಸಿ, ನಿಖರ ಕಾರಣ ಪತ್ತೆಹಚ್ಚಿ ರಾಷ್ಟ್ರೀಯ ಪಕ್ಷಿಯನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












