ಚಿತ್ರದುರ್ಗ.ಜು.25: ಡಿ.ಸುಧಾಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಜ್ಯೋತಿ ಬೆಳಗಿಸಿದ್ದೇವೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ ಹಾಗೂ ಈ ಮೂರರ ನೆನಪು ಮನುಷ್ಯತ್ವದ ಮೂಲವಾದರೆ, ಸುಧಾಕರ್ ಅವರ ನೆನಪು ಮೋಕ್ಷಕ್ಕೆ ಮೂಲವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವುಕರಾಗಿ ನುಡಿದರು.
ಹಿರಿಯೂರು ನಗರದ ನೆಹರು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ದಿವಂಗತ ಸುಧಾಕರ್ ಅವರ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸುಧಾಕರ್ ಕೇವಲ ಒಬ್ಬ ಮಂತ್ರಿಯಾಗಿರಲಿಲ್ಲ, ನನ್ನ ಆತ್ಮೀಯ ಸ್ನೇಹಿತ ಹಾಗೂ ಕುಟುಂಬದ ಸದಸ್ಯರಂತಿದ್ದರು. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಅವರನ್ನು ಪರಿಚಯಿಸಿ, ಚಳ್ಳಕೆರೆ ಕ್ಷೇತ್ರದಲ್ಲಿ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೆ ಎಂದು ಸ್ಮರಿಸಿದರು.
ಸುಧಾಕರ್ ಅವರ ಕುಟುಂಬ ಎಂದಿಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಲಿಲ್ಲ, ಬದಲಿಗೆ ನೀತಿ ಮತ್ತು ಮಾನವೀಯತೆಯ ಆಧಾರದ ಮೇಲೆ ಬದುಕಿದವರು. ಕ್ಷೇತ್ರದಲ್ಲಿ ಕಡಿಮೆ ಜನಸಂಖ್ಯೆಯಿದ್ದರೂ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ದು, ಕುವೆಂಪು ಅವರು ಹೇಳಿದಂತೆ ಈ ಜಿಲ್ಲೆಯಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನು ನಿರ್ಮಿಸಿದ್ದರು ಎಂದರು.
ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ ಸುಧಾಕರ್ ನೀಡಿದ ಸಹಕಾರ ನೆನಪಿಸಿಕೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷ ಹಾಗೂ ಸರ್ಕಾರ ಸುಧಾಕರ್ ಕುಟುಂಬಕ್ಕೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಆಶ್ವಾಸನೆ ನೀಡಿದರು.
ಮಾನವನ ಜನ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬುದನ್ನು ಬಸವಣ್ಣನವರು ನಮಗೆ ತಿಳಿಸಿಕೊಟ್ಟಿದ್ದಾರೆ. ವ್ಯಕ್ತಿಯ ಸಂಪತ್ತೆಂದರೆ ಕೇವಲ ಹಣವಲ್ಲ; ಗೌರವ, ಪ್ರೀತಿ, ಉತ್ತಮ ಸಂಬಂಧಗಳು ಮತ್ತು ಸಮಾಜಕ್ಕೆ ನೀಡುವ ಕೊಡುಗೆಗಳೇ ನಿಜವಾದ ಸಂಪತ್ತು ಎಂದರು.
ಮನುಷ್ಯನ ಹುಟ್ಟು ಉಚಿತ, ಮರಣ ನಿಶ್ಚಿತ, ಆದರೆ ಈ ಹುಟ್ಟು-ಸಾವಿನ ಮಧ್ಯೆ ನಾವು ಮಾಡುವ ಕೆಲಸಗಳು ಸಮಾಜದಲ್ಲಿ ಸದಾ ಶ್ರೇಷ್ಠವಾಗಿ ಉಳಿಯುತ್ತವೆ. ಹೀಗೆ ಸುಧಾಕರ್ ಕೊಡುಗೆಗಳು ಅಚ್ಚ ಹಸಿರಾಗಿರುತ್ತವೆ ಎಂದರು.
ಜನರ ಋಣ ತೀರಿಸಲು ಗ್ಯಾರಂಟಿ ಯೋಜನೆ :
ಪಕ್ಷದ 136 ಶಾಸಕರನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದ ಜನತೆಯ ಋಣ ತೀರಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಲೆ ಏರಿಕೆಯ ಸಂದರ್ಭದಲ್ಲಿ ಗ್ಯಾರಂಟಿಗಳು ಬಡವರ ನೆರವಿಗೆ ಬಂದಿವೆ. ರಾಜ್ಯದ 1 ಕೋಟಿ 60 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಬೆಳಗುತ್ತಿದೆ. ಹಾಗೆಯೇ 1 ಕೋಟಿ 21 ಲಕ್ಷ ಮನೆ ಯಜಮಾನಿಯರ ಖಾತೆಗೆ ನೇರವಾಗಿ ತಿಂಗಳಿಗೆ 2,000 ರೂಪಾಯಿ ತಲುಪುತ್ತಿದೆ ಎಂದರು.
ರೂ.244 ಕೋಟಿ ವೆಚ್ಚದ ಕೆರೆ ತುಂಬವ ಯೋಜನೆ ಮಂಜೂರು :
ಸುಧಾಕರ್ ಅವರ ಬೇಡಿಕೆಯಂತೆ ರೂ.244 ಕೋಟಿ ರೂಪಾಯಿ ವೆಚ್ಚದ ಹಿರಿಯೂರು ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಚಿತ್ರದುರ್ಗ ಬ್ರಾಂಚ್ ಕೆನಾಲ್ (ಸಿಬಿಸಿ) ಕಾಮಗಾರಿಯ 135 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಜೊತೆಗೆ ಐಮಂಗಲ ಭಾಗದ 60 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೂ ಈಗಾಗಲೇ ರೇಖೆಗಳನ್ನು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಚಳ್ಳಕೆರೆ ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘಮೂರ್ತಿ, ಆಹಾರ ನಿಗಮದ ಅಧ್ಯಕ್ಷ ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕರಾದ ತನ್ವೀರ್ ಶೇಠ್, ಬಸಂತಪ್ಪ, ಎಚ್. ವಿ. ವೆಂಕಟೇಶ್,ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ, ಸಲೀಂ ಅಹ್ಮದ್, ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಮಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ರಾಜ್ಯ ದ್ರಾಕ್ಷಾ ಮಂಡಳಿ ಅಧ್ಯಕ್ಷ ಡಾ.ಯೋಗಿಶ್ ಬಾಬು, ಬೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರಾಮಪ್ಪ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಖ್ಯಾತ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ, ಕೆ.ಪಿ.ಸಿ.ಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ದಿ.ಡಿ.ಸುಧಾಕರ್ ಅವರ ಪತ್ನಿ ಹರ್ಷಿಣಿ, ಪುತ್ರ ಸುಹಾಸ್, ಪುತ್ರಿ ಸ್ಪೂರ್ತಿ, ಅಳಿಯ ನಿತಿನ್ ಸೇರಿದಂತೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













