Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಎಲ್ಲ ಖಾಸಗಿ ಶಾಲೆಗಳಿಗೆ ಅನ್ವಯವಾಗುವುದಿಲ್ಲ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

---Advertisement---

ಚಿತ್ರದುರ್ಗ. ಜುಲೈ25: ರಾಜ್ಯದಲ್ಲಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ನಗರ ಪ್ರದೇಶಗಳ ಪ್ರಭಾವಿ ಹಾಗೂ ದೊಡ್ಡ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಉಚಿತವಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಶಿಕ್ಷಕರ ಅಭಾವವಿರುವ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸುವ ಯೋಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶನಿವಾರ ಹಿರಿಯೂರು ಪಟ್ಟಣದ ವೇದಾವತಿ ವಿಜ್ಞಾನ ಕಾಲೇಜು ಹಿಂಭಾಗದ ಕ್ರೀಡಾಂಗಣದ ಹೆಲಿಪ್ಯಾಡ್‍ನಲ್ಲಿ ಬರಪೀಡಿತ ಪ್ರದೇಶಗಳ ಪ್ರವಾಸಕ್ಕೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

 

ಹಳ್ಳಿ ಮಕ್ಕಳಿಗೆ ನಗರದಲ್ಲಿ ಸಿಗುವಂತೆಯೇ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಖಾಸಗಿ ಶಾಲೆಗಳು ಸರ್ಕಾರಿ ಶಾಲೆ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಎಲ್ಲಾ ಖಾಸಗಿ ಶಾಲೆಗಳಿಗೂ ಅನ್ವಯವಾಗುವುದಿಲ್ಲ. ದೊಡ್ಡ ಮಟ್ಟದ ಆದಾಯ ಹಾಗೂ ಸಾಮಥ್ರ್ಯ ಹೊಂದಿರುವ ಶಾಲೆಗಳು ಸಿಎಸ್‍ಆರ್ ನಿಧಿಯಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದ್ದು, ಶೈಕ್ಷಣಿಕ ವಲಸೆ ತಪ್ಪಲಿದೆ ಎಂದರು.

ಬೆಂಗಳೂರು ಹೊರತುಪಡಿಸಿ ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದಾವಣಗೆರೆ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯವಾಗಿ ಸಭೆ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಆಲಮಟ್ಟಿ ಹೊರತುಪಡಿಸಿ ಉಳಿದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಆಗಿದೆ.  ರಾಜ್ಯದ ಬಹಳಷ್ಟು ಕಡೆ ತೀವ್ರ ಬರ ಹಾಗೂ ಕುಡಿಯುವ ನೀರಿನ ತೊಂದರೆ ಕಂಡುಬಂದಿದೆ. ಈ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಡದಿ ರೈತರ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಕುರಿತು ಕೇಳಿದ ಮಾಧ್ಯಮದವರ ಪ್ರಶ್ನೆಗೆ, ರೈತರು ನಮ್ಮವರೇ, ಯಾರ ಮೇಲೆಯೂ ಒತ್ತಡ ತರುವ ಪ್ರಶ್ನೆಯೇ ಇಲ್ಲ. ಯಾವುದೇ ರೈತರಿಗೆ ತೊಂದರೆಯಾಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಹಿರಿಯೂರು ತಾಲ್ಲೂಕಿನ ಬರಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ, ಬೆಳೆ ಹಾನಿ ಪರಿಶೀಲನೆ: ಮುಂಗಾರು ಮಳೆ ಅಭಾವದಿಂದಾಗಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶನಿವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯೂರು ತಾಲೂಕು ವ್ಯಾಪ್ತಿಯ ಯರಬಳ್ಳಿ, ವದ್ದಿಕೆರೆ ತಾಳವಟ್ಟಿ, ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ಖುದ್ದಾಗಿ ತೆರಳಿ, ಬರ ಪರಿಸ್ಥಿತಿಯಿಂದ ಒಣಗಿರುವ ಬೆಳೆ ಹಾಗೂ ರೈತರ ಸಮಸ್ಯೆ ಆಲಿಸಿದರು.
ಮೊದಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯರಬಳ್ಳಿಯ ರೈತ ಮಹಲಿಂಗಯ್ಯ ಬಿನ್ ತಮ್ಮಯ್ಯ ಅವರ ಜಮೀನಿಗೆ ಭೇಟಿ ನೀಡಿ, ಭೂಮಿ ಸಿದ್ಧತೆ ಮಾಡಿಕೊಂಡಿದ್ದರೂ ಬಿತ್ತನೆ ಮಾಡಲು ಸಾಧ್ಯವಾಗದಿರುವುದನ್ನು ಖುದ್ದು ಪರಿಶೀಲಿಸಿದರು.
ಯರಬಳ್ಳಿ ಗ್ರಾಮದಲ್ಲಿ ಒಟ್ಟು 3,705 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯಿಲ್ಲದೆ ಕೇವಲ 350 ರಿಂದ 400 ಎಕರೆ ಸುಮಾರು ಶೇ.10 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉಳಿದ ಶೇ.90ರಷ್ಟು ಕ್ಷೇತ್ರದಲ್ಲಿ ಬಿತ್ತನೆ ಮಾಡಲಾಗದೆ ರೈತರು ಸಂಕಷ್ಟಕ್ಕೆ  ಸಿಲುಕಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

 

ಬಳಿಕ ವದ್ದೀಕೆರೆ ತಾಳವಟ್ಟಿ ಗ್ರಾಮದ ರೈತ ಪಿ.ಕೆ. ಪಾಂಡುರಂಗರೆಡ್ಡಿ ಬಿನ್ ಪಿ. ಕೃಷ್ಣಪ್ಪ ಅವರ ಜಮೀನಿಗೆ ಭೇಟಿ ನೀಡಿದ ಮುಖ್ಯಂತ್ರಿಗಳು, ಅಲ್ಲಿ ಬಿತ್ತನೆಯಾಗಿದ್ದ 48 ದಿನಗಳ ಸೂರ್ಯಕಾಂತಿ ಬೆಳೆ ವೀಕ್ಷಿಸಿದರು. ಮಳೆಯ ಅಭಾವದಿಂದಾಗಿ ಸಂಪೂರ್ಣ ಭೂಮಿ ಒಣಗಿ ಬಿರುಕು ಬಿಟ್ಟಿದ್ದು, ಬೆಳೆ ಬೆಳವಣಿಗೆ ಕುಂಠಿತಗೊಂಡಿರುವುದು ಕಣ್ಣಾರೆ ಕಂಡರು. ಸ್ಥಳದಲ್ಲಿದ್ದ ರೈತರಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ಯಾರೂ ಎದೆಗುಂದಬೇಕಾದ ಅಗತ್ಯವಿಲ್ಲ, ಸರ್ಕಾರ ನಿಮ್ಮೊಂದಿಗೆ ಸದಾ ಇರಲಿದೆ ಎಂದು ಅಭಯ ನೀಡಿದರು.

 

ಬೆಳೆ ವಿಮೆ ನೋಂದಣಿಗೆ ರೈತರಿಗೆ ಸಲಹೆ: ಬರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪ್ರತಿಯೊಬ್ಬ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವೇಳೆ ಮನವಿ ಮಾಡಿದರು.
ಬೆಳೆ ವಿಮೆ ಮಾಡಿಸುವುದರಿಂದ ನಷ್ಟ ಪರಿಹಾರ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರೈತರಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಖಂಡ್ರೆ,    ಶಾಸಕರುಗಳಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಮಾಜಿ ಶಾಸಕಿ ಪೂರ್ಣಿಮಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now