Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜನರ ಅಭ್ಯುದಯಕ್ಕಾಗಿ ʻಟೀಮ್ ಕರ್ನಾಟಕʼವಾಗಿ ಕರ್ತವ್ಯ ನಿರ್ವಹಣೆ : ಚಿತ್ರದುರ್ಗದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಡಿಕೆಶಿ ಕರೆ

---Advertisement---

ಚಿತ್ರದುರ್ಗ.ಜುಲೈ.25: ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಗೆ ಹೊಸ ರೂಪ ನೀಡಲು ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡಬೇಕಿದೆ ಎಂದು ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಾಸ್ತಾವಿಕ ನುಡಿಗಳು

ಸರ್ಕಾರ ಹಾಗೂ ಆಡಳಿತಕ್ಕೆ ಹೊಸ ರೂಪ ನೀಡಲು ನಾವೆಲ್ಲರೂ `ಟೀಮ್ ಕರ್ನಾಟಕ’ವಾಗಿ ಕೆಲಸ ಮಾಡಬೇಕಿದೆ. ಜನರ ಮಧ್ಯೆ ಸರ್ಕಾರ ಇರುವಂತೆ ನೋಡಿಕೊಳ್ಳಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ‘ಪ್ರಜಾಸೇವಾ ಇಲಾಖೆ’ ಸ್ಥಾಪಿಸಲಾಗುತ್ತಿದ್ದು, ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಪ್ರತಿ ವಿಧಾನಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುವುದು. ಜನರು ನೀಡಿದ ಅರ್ಜಿಗೆ ಪರಿಹಾರ ಸಿಗುವ ತನಕ ಗಮನ ಹರಿಸಬೇಕು ಹಾಗೂ ಸಚಿವರು ಎಲ್ಲಾ ಕ್ಷೇತ್ರಗಳಿಗೂ ಪ್ರವಾಸ ಮಾಡಿ ಯಾವುದೇ ಪಕ್ಷದ ಶಾಸಕರಿದ್ದರೂ ವಿಶ್ವಾಸಕ್ಕೆ ತೆಗೆದುಕೊಂಡು ಅಹವಾಲು ಸ್ವೀಕರಿಸಬೇಕು.

ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು, ಆಗ ಎಲ್ಲಾ ಮಂತ್ರಿಗಳು ಒಟ್ಟಾಗಿ ಇಡೀ ರಾಜ್ಯದ ಬರ ಪರಿಸ್ಥಿತಿಯನ್ನು ಅವಲೋಕಿಸಿ ಹಳ್ಳಿಗಳಲ್ಲಿ ರೈತರ ಬದುಕಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕಾಗಿದೆ. ಬೆಳಗಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ಗ್ರಾಮೀಣ ಭಾಗದ ಪ್ರತಿ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಕೆಗೆ ₹1 ಕೋಟಿವರೆಗೆ ಖರ್ಚು ಮಾಡಬಹುದು, ಹೊಸ ಬೋರ್ವೆಲ್ ಕೊರೆದರೆ ಜಿಪಿಎಸ್ ಮಾಹಿತಿ ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಮಾಹಿತಿ ಪಾರದರ್ಶಕವಾಗಿರಬೇಕು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಆಗಬಾರದು ಹಾಗೂ RO ಪ್ಲಾಂಟ್ ಗಳ ದುರಸ್ತಿ ಬಗ್ಗೆ ಗಮನ ಹರಿಸಬೇಕು.

ರೈತರು ಮುಂದಿನ ಮಳೆ ಅಥವಾ ಅಣೆಕಟ್ಟು ನೀರು ನೆಚ್ಚಿಕೊಂಡು ಬೆಳೆ ಹಾಕಬಾರದು ಎಂದು ಮನವಿ ಮಾಡಿದ್ದೇನೆ. ಅಧಿಕಾರಿಗಳು ಬೆಳೆ ವಿಮೆ ಕುರಿತು ಕೆಲಸ ಮಾಡಬೇಕು. ಆಲಮಟ್ಟಿ ಹೊರತಾಗಿ ಬೇರೆ ಯಾವ ಜಲಾಶಯದಲ್ಲೂ ನೀರಿನ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಸಮಿತಿ ಮುಂದೆ ಹೇಳಲಾಗಿದೆ.

ಪ್ರಧಾನಿ ಮೋದಿ ಅವರು `ಎಲ್ ನೀನೋ’ ಪರಿಣಾಮದ ಬಗ್ಗೆ ಮಾತನಾಡಿದ್ದು, ನಾನು ಸಹ ಪ್ರಧಾನಿಯವರಿಗೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ ಮತ್ತು ಉಪಮುಖ್ಯಮಂತ್ರಿಗಳು ಕೂಡಾ ವಸ್ತುಸ್ಥಿತಿ ತಿಳಿಸಲು ಪ್ರಧಾನಿಯವರ ಬಳಿಗೆ ಶೀಘ್ರ ನಿಯೋಗ ಕಳುಹಿಸಲಿದ್ದಾರೆ.

ʻವಿಬಿಜಿ ರಾಮ್ ಜಿ’ ಹೆಸರು ಬದಲಾವಣೆ ಮತ್ತು ಹೊಸ ರೂಪ ನೀಡಲು ರೂಪುರೇಷೆ ತಯಾರಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಶೇ.40 ರಷ್ಟು ಹಣ ನೀಡಬೇಕಾಗಿದೆ.

ಸಿಎಸ್ಆರ್ ಅನುದಾನ ಬಳಕೆ, ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿ ಹಾಗೂ ಗೃಹಲಕ್ಷ್ಮೀ ಹಣ ನಕಲಿ ಖಾತೆಗಳಿಗೆ ಹೋಗಿರುವುದನ್ನು ಪರಿಶೀಲಿಸುವ ಕೆಲಸ ಮಾಡಲಾಗುತ್ತಿದೆ. SIRನಿಂದ ಮುಂದೂಡಲ್ಪಟ್ಟಿದ್ದ ವಿಧಾನಸಭೆ ಅಧಿವೇಶನವು ಆಗಸ್ಟ್ ಎರಡನೇ ವಾರ ಅಥವಾ 6 ನೇ ತಾರೀಖಿನಂದು ನಡೆಯಬಹುದು. ಎಲ್ಲಾ ಶಾಸಕರು ನೇರವಾಗಿ ನನ್ನ ಬಳಿಯೇ ಯಾವುದೇ ಸಮಸ್ಯೆ ಇದ್ದರೂ ಹೇಳಬಹುದು ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸುವ ಬದಲು ಬಸವಣ್ಣನವರ ನಾಡು, ಕಲಬುರ್ಗಿ ಮತ್ತು ಬೆಳಗಾವಿಯಲ್ಲಿ ಸಭೆ ನಡೆಸಿ ಬರ ನಿರ್ವಹಣೆ ಬಗ್ಗೆ ಚರ್ಚಿಸಿದಂತೆ ಚಿತ್ರದುರ್ಗದ ಸಭೆಯೂ ಹೆಚ್ಚು ಫಲಪ್ರದವಾಗಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now