ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 18 : ಪ್ರತಿಯೊಬ್ಬರು ಜ್ಞಾನದ ಮೂಲಕ ವಿಶ್ವಮಾನವರಾಗಬೇಕೆಂಬ ಸಂದೇಶ ನೀಡಿದವರು ಕನ್ನಡ ಸಾಹಿತ್ಯದ ಯುಗದ ಕವಿ ಕುವೆಂಪು ಎಂದು ನಿವೃತ್ತ ಪ್ರಾಚಾರ್ಯರಾದ ಡಾ.ಸಿ.ಶಿವಲಿಂಗಪ್ಪ ಬಣ್ಣಿಸಿದರು.
ರಾಷ್ಟ್ರಕವಿ ಕುವೆಂಪು ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯ 2 ನೇ ವರ್ಷದ ಸಮಾರಂಭವನ್ನು ಪ್ರವಾಸಿ ಮಂದಿರದಲ್ಲಿ ಶನಿವಾರ ಉದ್ಘಾಟಿಸಿ ರಾಮಾಯಣ ದರ್ಶನದ ಉದಯದೊಳಗಿನ ಬೆಳಕು ಕುವೆಂಪುರವರ ವಿಚಾರಧಾರೆ ಅವಲೋಕನ ಕುರಿತು ಮಾತನಾಡಿದರು.
1945 ರಲ್ಲಿ ರಾಮಾಯಣ ದರ್ಶನ ಪೂರ್ಣಗೊಳಿಸಿ 1949 ರಲ್ಲಿ ಪ್ರಕಟಗೊಂಡಾಗ ಮೊದಲ ಕಾವ್ಯವನ್ನು ತಳಕಿನ ಟಿ.ಎಸ್.ವೆಂಕಣ್ಣಯ್ಯನವರಿಗೆ ಕುವೆಂಪುರವರು ಸಮರ್ಪಿಸುತ್ತಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಕ್ಕೂ ಉದ್ದಾರವಿದೆ. 25 ಸಾವಿರ ಸಾಲುಗಳನ್ನೊಳಗೊಂಡಿರುವ ರಾಮಾಯಣ ದರ್ಶನ ಮಹಾ ಕಾವ್ಯ ವಿಶ್ವ ಕನ್ನಡ ಸಾಹಿತ್ಯಕ್ಕೆ ಅತ್ಯುನ್ನತ ಸ್ಥಾನ ಕೊಟ್ಟಿದೆ. ವಿಜ್ಞಾನದ ಹೊಸ ಆಶಯಗಳನ್ನು ಕಾವ್ಯದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ. ಪ್ರಕೃತಿ ಕೇವಲ ಸೌಂದರ್ಯವಲ್ಲ. ಆತ್ಮಚೇತನದ ಶಕ್ತಿ ಎನ್ನುವುದು ಕುವೆಂಪುರವರ ಬಲವಾದ ನಂಬಿಕೆಯಾಗಿತ್ತೆಂದರು.
ಪುರೋಹಿತ ಶಾಹಿಗಳ ದಾಸ್ಯದಿಂದ ಮನುಷ್ಯನನ್ನು ವಿಮೋಚನೆಗೊಳಿಸುವುದು ಕುವೆಂಪುರವರ ಆಶಯವಾಗಿತ್ತು. ಸರಳ ವಿವಾಹದಿಂದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿಕೊಳ್ಳಬೇಕು. ಸಮಾಜದ ಮೇಲಿನ ಕಳಕಳಿ, ಸ್ವಾತಂತ್ರ್ಯ ಚಳುವಳಿ, ಪ್ರಜಾಪ್ರಭುತ್ವ ವ್ಯವಸ್ಥೆ ಇವುಗಳ ಮೌಲ್ಯ ಅನುಸರಿಸಿ ಕಾವ್ಯ ರಚಿಸಿರುವ ಕುವೆಂಪುರವರು ಧರ್ಮ, ಜಾತಿ, ಅಸಮಾನತೆ, ವರ್ಣಭೇದ ಮೀರಿ ಅನಿಕೇತನವಾಗಬೇಕೆಂಬ ಆಸೆಯಿಟ್ಟುಕೊಂಡಿದ್ದರೆಂದರು.
ಸಾಹಿತಿ ರವಿ ಟಿ. ಮಾತನಾಡಿ ಕತ್ತಲೆಯಲ್ಲಿ ಬೆಳಕಿದೆ ಎಂಬ ಆಶಯವುಳ್ಳವರಾಗಿದ್ದ ಕುವೆಂಪುರವರ ಬಗ್ಗೆ ಎಷ್ಟು ವಿಚಾರಗಳನ್ನು ತಿಳಿದುಕೊಂಡರು ಕಡಿಮೆಯೇ. ಅವರ ನಾಟಕ, ಕಾವ್ಯ, ಕವಿತೆ, ಕಾದಂಬರಿಯಲ್ಲಿ ಸಮಾಜದಲ್ಲಿನ ಅನಿಷ್ಟ ಪದ್ದತಿ ದೂರ ಮಾಡಬೇಕೆಂಬ ಹಂಬಲವಿತ್ತು. ಮಂತ್ರ ಮಾಂಗಲ್ಯದ ಮೂಲಕ ಸರಳ ವಿವಾಹಕ್ಕೆ ಒತ್ತು ಕೊಟ್ಟರು. ಸಮಾಜದಲ್ಲಿ ಸಮಾನತೆ ಸೃಷ್ಟಿಸುವ ಪರಿಕಲ್ಪನೆ ಅವರದಾಗಿತ್ತು. ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬ ಆಶಯದೊಂದಿಗೆ ಜಾತಿಯತೆಯನ್ನು ಮೀರಿ ನಿಂತವರು ಎಂದು ಹೇಳಿದರು.
ದಲಿತ ಮುಖಂಡ ಬಿ.ರಾಜಪ್ಪ ಮಾತನಾಡುತ್ತ ಯುಗದ ಕವಿ, ಜಗದ ಕವಿ ಎನಿಸಿಕೊಂಡಿರುವ ಕುವೆಂಪುರವರು ಬಡ ಕುಟುಂಬದಲ್ಲಿ ಜನಿಸಿದವರು. ಕನ್ನಡಕ್ಕೆ ಮೊದಲ
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ರಸ ಋಷಿ ಕುವೆಂಪುರವರ ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಮೂಢನಂಬಿಕೆ, ಅಸಮಾನತೆ, ಜಾತಿ ಪದ್ದತಿ ವಿರುದ್ದ ಹೋರಾಡಿದರು. ಮನುಜ ಮತ, ವಿಶ್ವ ಪತ ಎನ್ನುವ ಸಂದೇಶ ಅವರದಾಗಿತ್ತೆಂದು ನುಡಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಉಪನ್ಯಾಸಕ ಓ.ಮಲ್ಲಿಕಾರ್ಜುನ ಮಾತನಾಡಿ ನಮ್ಮ ದೇಶ ಸಂಘರ್ಷ, ಅಂಧಕಾರದಲ್ಲಿದ್ದ ಸಂದರ್ಭದಲ್ಲಿ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದ ಇನ್ನು ಅನೇಕ ದೇಶಭಕ್ತರ ಪ್ರೇರಣೆಯಿಂದ ರಾಷ್ಟ್ರ ಕವಿ ಕುವೆಂಪುರವರು ಕಾವ್ಯ ರಚಿಸಲು ಕಾರಣವಾಯಿತು. ಪಾಪಿಗೂ ಉದ್ದಾರವಿದೆ ಎನ್ನುವ ಅಂಶವನ್ನು ಕಾವ್ಯದಲ್ಲಿ ಬರೆದಿದ್ದಾರೆ. ಅವರ ರಾಮಾಯಣ ದರ್ಶನ ಮಹಾ ಕಾವ್ಯಕ್ಕೆ ವೈಚಾರಿಕ, ಆಧ್ಯಾತ್ಮಿಕ ವಿಚಾರಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಎಲ್ಲರೂ ತಮ್ಮ ಬದುಕನ್ನು ಉದ್ದರಿಸಿಕೊಳ್ಳಬೇಕಾದರೆ ಕುವೆಂಪುರವರ ಸಾಹಿತ್ಯ ಓದಬೇಕೆಂದು ತಿಳಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕ ಎಸ್.ಲಕ್ಷ್ಮಿಕಾಂತ್, ದಲಿತ ಮುಖಂಡ ಡಿ.ದುರುಗೇಶಪ್ಪ ಇವರುಗಳು ಕುವೆಂಪುರವರ ರಾಮಾಯಣ ದರ್ಶನದ ಉದಯದೊಳಗಿನ ಬೆಳಕು ವಿಚಾರಧಾರೆ ಕುರಿತು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷೆ ಡಿ.ಪ್ರತಿಭಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಎಸ್.ಹೆಚ್.ಮಲ್ಲಿಕಾರ್ಜುನ, ಕುಮಾರರೆಡ್ಡಿ, ಕೆ.ರುದ್ರಮುನಿ, ಮಹಲಿಂಗಪ್ಪ, ಸುರೇಶ್, ಮಂಜುನಾಥ, ಶಿವಣ್ಣ, ಕೆ.ಶಶಿಕುಮಾರ, ಎಂ.ರಾಜೇಂದ್ರಬಾಬು, ಎಂ.ಧನಂಜಯ, ದ್ಯಾಮಕ್ಕ, ದೇವಮ್ಮ, ಲಕ್ಷ್ಮಿಚಾಪ್ರಿ, ಪುಷ್ಪವತಿ ಇವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












