ಸುದ್ದಿಒನ್, ಹೊಳಲ್ಕೆರೆ , ಜು,13, ಈಗೀಗ ಮನುಷ್ಯ- ಮನುಷ್ಯರ ನಡುವೆ ಐಕ್ಯತೆ, ಹೊಂದಾಣಿಕೆ, ಸಹಬಾಳ್ವೆಯ ಕೊರತೆ ಎದ್ದು ಕಾಣುತ್ತಿದೆ. ಪ್ರೀತಿಗೆ ಅಭಾವ ಬಂದಿದೆ. ಕಾರಣ ಅಂತಹುವುಗಳು ಸರಿಯಾಗಲು ಧಾರ್ಮಿಕ ಸತ್ಸಂಪ್ರದಾಯ ಮತ್ತು ಆಚರಣೆಗಳು ಪುಷ್ಟಿ ನೀಡುತ್ತವೆ. ಬಿರುಕು ಬಿಟ್ಟ ಸಂಬಂಧಗಳನ್ನು ಬೆಸೆಯುವ ಕಾರ್ಯ ಮಾಡುತ್ತವೆ. ಅವುಗಳನ್ನು ನಿರ್ವಹಿಸುವ ಮತ್ತು ಬೆಸೆಯುವ ಕೊಂಡಿಯಾಗಿ ನಿಲ್ಲುವ ಮನಸ್ಸುಗಳು ಬೇಕಾಗಿದೆ ಎಂದು ಚನ್ನಗಿರಿ ಹಿರೇಮಠದ ಡಾ. ಕೇದಾರಲಿಂಗ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.
ಶ್ರೀಗಳು ಹೊಳಲ್ಕೆರೆ ತಾಲೂಕಿನ ಈಚಘಟ್ಟ ಗ್ರಾಮದ ಗದ್ದುಗೆ ಮಠದ ಸಮಿತಿಯವರು ಏರ್ಪಡಿಸಿದ್ದ ಪುರಾತನ ದೇವಾಲಯದ ಜೀರ್ಣೋದ್ಧಾರ ವಿಶೇಷ ಪೂಜಾ ಹಾಗೂ ದಾಸೋಹ ವಿನಿಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸ್ಥಳ ಪೂರ್ವದಲ್ಲಿ ನಾಲ್ಕೈದು ತಲೆಮಾರು ಅಂದರೆ ಶತಮಾನದಷ್ಟು ಹಿಂದೆ ಸ್ವಾಮಿಗಳೊಬ್ಬರು ತಪಗೈದು ಬಯಲಾಗಿದ್ದು, ಅಂತಹ ಪುಣ್ಯ ಪುರುಷರ ಲಿಂಗೈಕ್ಯ ಸ್ಥಳ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಗದ್ದುಗೆ ಮಠದ ಸಮಿತಿಯರು ಇದೀಗ ನವೀಕರಣಗೊಳಿಸಿರುವುದು ಬಹು ಹಿಂದಿನಿಂದಲೂ ಮುಂಜಾನೆ ಮತ್ತು ಸಂಜೆ ಪೂಜಾ ವಿಧಾನಗಳು ಯಥಾಪ್ರಕಾರ ನಡೆಯುತ್ತಿರುವುದು ವಿಶೇಷವಾಗಿದೆ. ಹಿಂದಿನವರು ತಮ್ಮ ತ್ಯಾಗ, ಕಠಿಣ ವ್ರತಾಚಾರಣೆಗಳ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ಜಾಗೃತಿಯನ್ನು ಉಂಟು ಮಾಡುತ್ತಿದ್ದರು. ಸಮಾಜ ಅಂತವರ ಮಾತಿಗೆ ಮನ್ನಣೆಯನ್ನೂ ನೀಡುತ್ತಿತ್ತು. ಯಾವುದೇ ಹಳ್ಳಿ ,ಪಟ್ಟಣ, ನಗರಗಳಿಗೆ ತನ್ನದೇ ಆದ ಐತಿಹ್ಯಗಳಿರುತ್ತವೆ.,ಅಂತಹ ಕುರುಹೂ ಸಹ ಈಚಘಟ್ಟ ಗ್ರಾಮದಲ್ಲಿರುವುದು ಸಹ ವಿಶೇಷವೇ ಸರಿ ಎಂದ ಶ್ರೀಗಳು ಇಂತಹ ಕಾರ್ಯಕ್ರಮಗಳು ನಮ್ಮ ನಮ್ಮ ನಡುವಿನ ದ್ವೇಷಾಸೂಹೆಗಳನ್ನು ಕಡಿಮೆಯಾಗಿಸಿ ಸಂಬಂಧ ಗಟ್ಟಿಗೊಳ್ಳುವ ಮಧುರ ಬಾಂಧವ್ಯಕ್ಕೆ ಇಂತಹ ಧಾರ್ಮಿಕ ಆಚರಣೆಗಳಿಂದ ಸಾಧ್ಯವಾಗಲಿದೆ.ಇಂದು ಬಹುತೇಕರು ಶಿಕ್ಷಣ ಹೊಂದುತ್ತಿದ್ದಾರೆ. ಆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ,ಸ್ವತಂತ್ರ ಉದ್ಯೋಗ ಹೊಂದುವ, ನೌಕರಿ ಪಡೆದು ಸ್ಥಿತಿವಂತರಾಗುತ್ತಿದ್ದಾರೆ. ಇದರಿಂದ ಹಣ ಸಂಪಾದನೆಯು ನಡೆದಿದೆ. ಹಣ ಸಂಪಾದನೆಯ ಜೊತೆಗೆ ಸದ್ಗುಣಿಗಳಾಗುವ ಪ್ರಯತ್ನ ನಡೆಯಬೇಕಿದೆ .ಈ ಗ್ರಾಮದ ಮಠದ ವಂಶಸ್ಥರಲ್ಲಿ ಒಬ್ಬರಾಗಿ ರಾಜಕುಮಾರಸ್ವಾಮಿ ಗ್ರಾಮ ಬಿಟ್ಟು ಕಳೆದ 30 ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ಕೋರ್ಸ್ ಪಡೆದು ,ಬೆಂಗಳೂರಿಗೆ ಹೋಗಿ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಿಸಿ ಅವರೆ ಒಂದು ಉದ್ಯಮ ಸ್ಥಾಪಿಸಿರುವುದು ಸಮಾಜದಲ್ಲಿ ಹೆಮ್ಮೆಪಡುವ ಸಂಗತಿ. ಅವರೂ ಸಹ ದುಡಿಮೆಯಲ್ಲಿ ದಾಸೋಹ ಪ್ರಜ್ಞೆ ಇಟ್ಟುಕೊಂಡು ಇಂತಹ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ಮುಂದಾಗಿದ್ದರೆ .ಇದು ಮಾದರಿ ಕೆಲಸ ಎಂದ ಶ್ರೀಗಳು ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಹಾಗೂ ಪರ ಊರುಗಳಿಂದ ಬಂದ ಗದ್ದುಗೆ ಮಠದ ವಂಶಸ್ಥರು, ಅಭಿಮಾನಿಗಳು ಭಾಗವಹಿಸಿದ್ದರು. ಮಧುರೆಯ ಮೋಕ್ಷಾಪತಿ, ಸಿದ್ದಲಿಂಗಮೂರ್ತಿ, ಮದ್ದೇರಿನ ಶಿವಾನಂದಯ್ಯ, ಗೊಡಬನಾಳಿನ ಮುರಿಗೆಮ್ಮ ಮಕ್ಕಳು, ಸಿದ್ದನಮಠದ ಶಿವಮೂರ್ತಯ್ಯ, ಭದ್ರಾವತಿ ರೇಣುಕಯ್ಯ, ಹಾವೇರಿಯ ಶಿವಯೋಗಿಸ್ವಾಮಿ, ರಾಣೆಬೆನ್ನೂರಿನ ಕೋರಧಾನ್ಯಮಠ, ಹಿರೇಕಂದವಾಡಿಯ ಪ್ರತಿಭಾ, ಚಿಕ್ಕಜಾಜೂರಿನ ಜಗನ್ಮಾತೆ, ಚಿತ್ರದುರ್ಗದ ಚನ್ನಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
ಗದ್ದುಗೆ ಮಠದ ಜೀರ್ಣೋದ್ಧಾರ ಉಸ್ತುವಾರಿ ಸಮಿತಿಯ ಹಿರಿಯರಾದ ಚೆನ್ನಬಸವಯ್ಯ ,ಮಹಾರುದ್ರಯ್ಯ ,ಎಂ. ಜೆ ನಂಜಪ್ಪಯ್ಯ ,ಎಂ. ಸಿ .ರಾಜಕುಮಾರಸ್ವಾಮಿ, ಅನುಸೂಯಮ್ಮ,ಎಂ.ಯು.ಮಲ್ಲಿಕಾರ್ಜುನಯ್ಯ ಅವರುಗಳು ನಿರ್ವಹಣೆ ವಹಿಸಿಕೊಂಡಿದ್ದರು. ಪೂಜಾ ವಿಧಾನಗಳನ್ನು ಪ್ರಧಾನ ಅರ್ಚಕರಾದ ವೀರಭದ್ರಪ್ಪ ,ವಿನಯ್ ಕುಮಾರ್ ವಹಿಸಿಕೊಂಡು ನಡೆಸಿಕೊಟ್ಟರು. ಗ್ರಾಮದ ಪ್ರಮುಖರಾದ ಡಿ.ಎಂ. ಪ್ರಸನ್ನಕುಮಾರ್ ಯು.ಎಸ್ ಉಜ್ಜನಪ್ಪ ,ಮೂಲೆಮನೆ ವೀರಭದ್ರಪ್ಪ, ಮುಖಂಡ ಯು .ಎಸ್. ತಿಪ್ಪೇಸ್ವಾಮಿ,ಅಂಕಳಪ್ಪ,ಚಂದ್ರಪ್ಪ, ಮಹಾರುದ್ರಪ್ಪ,
ಶಿವಲಿಂಗಪ್ಪ,ಮಹದೇವಪ್ಪ, ಗ್ರೈಗ್ರಾಮದ ಪ್ರಮುಖರು, ಮಹಿಳೆಯರು ,ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ನಂತರ ಭಾಗವಹಿಸಿದ ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.









