Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಮಾದಿಗ ನೌಕರರ ಸಂಘದ ಸಮಾರಂಭದಲ್ಲಿ ರಾಜಕೀಯ ನಾಯಕರ ವಾಕ್ಸಮರ!

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಬೇರೆ ಬೇರೆ ಜಾತಿಯವರನ್ನು ತಂದು ಪರಿಶಿಷ್ಟ ಜಾತಿಗೆ ಸೇರಿಸಿದ ಮೇಲೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕಿತ್ತು. ಅದನ್ನು ಬಿಟ್ಟು ಕೇಂದ್ರದ ಕಡೆ ಕೈ ತೋರಿಸುವುದು ಸರಿಯಲ್ಲ. ಕಾಂಗ್ರೆಸ್‍ನಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಕಿಡಿ ಕಾರಿದರು.

 

ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಜಿಲ್ಲಾ ಶಾಖೆಯಿಂದ 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾನ್ವಿತ ಮಾದಿಗ ವಿದ್ಯಾರ್ಥಿಗಳಿಗೆ ಶಿವಶರಣ ಮಾದಾರ ಚನ್ನಯ್ಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

 

1950 ರಲ್ಲಿ ಮೊಟ್ಟ ಮೊದಲು ಮೀಸಲಾತಿ ಜಾರಿಯಾದಾಗ ಎಸ್ಸಿ.ಯಲ್ಲಿ ಆರು, ಎಸ್ಟಿ.ಯಲ್ಲಿ ಆರು ಜಾತಿಗಳಿದ್ದವು. ಈಗ ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳಿವೆ. ಜಾತಿ ಸೇರಿಸಿ ಸಂಖ್ಯೆಯನ್ನು ಹೆಚ್ಚಿಸುವುದು ಮುಖ್ಯವಲ್ಲ. ಮೀಸಲಾತಿಯನ್ನು ಹೆಚ್ಚಳ ಮಾಡಬೇಕಿತ್ತು. ಓ.ಬಿ.ಸಿ.ಗೆ ಮೀಸಲಾತಿ ಕೊಟ್ಟಿದೆ. ನಮಗೇಕಿಲ್ಲ. ಬೇರೆ ಬೇರೆ ಜಾತಿಯವರನ್ನು ತಂದು ಎಸ್ಸಿ.ಗೆ ಸೇರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು?
ಹಿರಿಯ ಅನುಭವಿ ರಾಜಕಾರಣಿ ಕೆ.ಹೆಚ್.ಮುನಿಯಪ್ಪನವರಿಗೆ ಆಹಾರ ಖಾತೆ ನೀಡಿರುವುದು ಯಾವ ನ್ಯಾಯ? ಬಿಸಾಡಿ ಹೊರ ಬನ್ನಿ ಎಂದು ಹೇಳಿದ್ದೇನೆ. ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಪಾಲಿಸಲಿ ಸಾಕು. ಯಾರು ಒಳ ಸಂಚು ಮಾಡುತ್ತಿದ್ದಾರೆ. ಯಾರಿಂದ ಅನ್ಯಾಯವಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಯಾರ ಹೆಸರನ್ನು ಹೇಳದೆ ವೇದಿಕೆ ಮೇಲಿದ್ದವರಿಗೆ ಕುಟುಕಿದರು.

 

ನಮ್ಮ ಮಕ್ಕಳು ಮುಂದುವರೆದ ಜನಾಂಗದ ಮಕ್ಕಳ ಜೊತೆ ಪೈಪೋಟಿ ಮಾಡಲು ಆಗುತ್ತಿಲ್ಲ. ಬ್ರಾಹ್ಮಣರಿಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಲಿಂಗಾಯಿತರಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆಸ ನಮಗೆ ಕೇವಲ 75 ವರ್ಷಗಳ ಇತಿಹಾಸವಿದೆ ಎನ್ನುವುದಾದರೆ ಎಷ್ಟು ಅಜಗಜಾಂತರವಿದೆ ಎನ್ನುವುದು ಗೊತ್ತಾಗುತ್ತದೆ.
ಮಾದಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಶ್ರೇಷ್ಟವಾದ ಕೆಲಸ. ಇದರಿಂದ ಬೆನ್ನು ತಟ್ಟಿ ಇನ್ನು ಹೆಚ್ಚಿನ ಸಾಧನೆಗೆ ಉತ್ತೇಜಿಸಿದಂತಾಗುತ್ತದೆ. ಇಂತಹ ಪ್ರತಿಭಾ ಪುರಸ್ಕಾರ ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ ನಡೆಯಬೇಕೆಂದು ಮಾದಿಗ ನೌಕರರಿಗೆ ತಿಳಿಸಿದರು.

 

ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಇದು ಸ್ಪರ್ಧಾತ್ಮಕ ಯುಗ ಎಲ್ಲಾ ಜಾತಿ ಜನಾಂದವರೊಡನೆ ನಮ್ಮ ಮಕ್ಕಳು ಪೈಪೋಟಿಗೆ ಸಿದ್ದರಾಗಬೇಕು. ಒಂದೊಂದು ಅಂಕಗಳಿಗೂ ಪ್ರಾಧಾನ್ಯತೆಯಿದೆ. ಮುಂದೆ ವೈದ್ಯರು, ಇಂಜಿನಿಯರ್‍ಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಾಗಬೇಕೆಂಬ ಕನಸು ಕಂಡಿದ್ದೀರ. ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳಿವೆ. ಬಳಸಿಕೊಂಡು ಜೀವನದಲ್ಲಿ ಮುಂದೆ ಬರುವಂತೆ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 

ನಾನು ಸಚಿವನಾಗಿದ್ದಾಗ ಬಿ.ಎನ್.ಚಂದ್ರಪ್ಪನವರನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲಿಸಿಕೊಂಡೆ. ಜನಾಂಗದ ಏಳು ಮಂದಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ನನ್ನ ಶ್ರಮವಿದೆ. ಚಿಕ್ಕಮಗಳೂರಿನಿಂದ ಬಿ.ಎನ್.ಚಂದ್ರಪ್ಪನನ್ನು ಕರೆ ತಂದು ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ಸಿಗುವಂತೆ ಮಾಡಿದಾಗ ಎಲ್ಲರೂ ಬಿ.ಎನ್.ಚಂದ್ರಪ್ಪ ಮಾಶಾಲರು ಎಂದು ಅಪ ಪ್ರಚಾರ ಮಾಡಿದರು. ನನ್ನ ಮೇಲೆ ಅನೇಕ ಷಡ್ಯಂತ್ರಗಳು ನಡೆದವು. 2023 ರ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದಾಗ ಸ್ವಯಂ ಕೃತ ಅಪರಾಧದಿಂದ ಸೋಲಬೇಕಾಯಿತು. ನಾನು ಸ್ವಾಭಿಮಾನಿ. ಸಿಟ್ಟು, ಕೋಪ, ದಿಮಾಕು ಜಾಸ್ತಿ ಎಂದು ಹೆಚ್.ಆಂಜನೇಯ ಸಮರ್ಥಿಸಿಕೊಂಡರು.

 

ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬ್ರಾಹ್ಮಣರು ಕೇಳದಿದ್ದರೂ ಈ ದೇಶದ ಪ್ರಧಾನಿ ಮೋದಿರವರು ಶೇ.10 ರಷ್ಟು ಮೀಸಲಾತಿ ಕೊಟ್ಟರು. ಆಗ ತಿದ್ದುಪಡಿ ಮಾಡಲು ಆಯಿತು. ಮಾದಿಗರಿಗೆ ಏಕೆ ಮಾಡಲಿಲ್ಲ? ಸಂಸದ ಗೋವಿಂದ ಎಂ.ಕಾರಜೋಳರವರು ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆ ಬೈದರು ಅಟ್ಯಾಕ್ ಮಾಡುತ್ತೇನೆ. ಸಹಿಸಿಕೊಂಡು ಸುಮ್ಮನಿರುವುದಿಲ್ಲ ಎಂದು ತಿರುಗೇಟು ನೀಡಿದಾಗ ಕೆಲವು ನಿಮಿಷಗಳ ಕಾಲ ಸಮಾರಂಭದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು.

 

ಮಕ್ಕಳಿಗೆ ಅಂಕ ಮುಖ್ಯವಲ್ಲ. ಸಂಸ್ಕಾರ ಮುಖ್ಯ ಎಂದು ಎಲ್ಲರೂ ಹೇಳಿದ್ದೇ ಹೇಳುತ್ತಿರುತ್ತಾರೆ. ಸರ್ಕಾರಿ ನೌಕರಿಗೆ ಹೋಗಬೇಕಾದರೆ ಒಂದೊಂದು ಅಂಕಕ್ಕೂ ಬೆಲೆಯಿದೆ. ಹಾಗಾಗಿ ಮಕ್ಕಳಿಗೆ ಅಂಕವೇ ಪ್ರಧಾನವಾಗಬೇಕು. ಬ್ರಾಹ್ಮಣರು, ಲಿಂಗಾಯಿತರ ಜೊತೆ ಪೈಪೋಟಿ ಮಾಡುವುದು ಕಷ್ಟ. ಅದಕ್ಕಾಗಿಯಾದರೂ ಮಾದಿಗ ನೌಕರರು ಒಂದಾಗಬೇಕು. ರಾಜ್ಯದಲ್ಲಿ ಮಲ ಹೊರುವ 45 ಸಾವಿರ ಪೌರ ಕಾರ್ಮಿಕರಿದ್ದಾರೆ. ಅವರುಗಳೆ ನಿಜವಾದ ಮಾದಿಗರು. ಹಾಗಾಗಿ ಒಳ ಮೀಸಲಾತಿ ಬೇಕು. ಶಿಕ್ಷಣ ನೌಕರಿಯಲ್ಲಿ ಮೀಸಲಾತಿ ಸಿಕ್ಕರೆ ಸಾಲದು. ಆರ್ಥಿಕವಾಗಿ ಮೀಸಲಾತಿ ದೊರೆಯಬೇಕು. ಆಗ 39 ಇಲಾಖೆಯಲ್ಲಿರುವ ಮಾದಿಗ ನೌಕರರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿರುವ 38 ಎಂಎಲ್‍ಎ.ಗಳಲ್ಲಿ 33 ಶಾಸಕರುಗಳು ಒಳ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಈಗಾದರೆ ಮಾದಿಗರ ಗತಿಯೇನು ಎಂದು ಪ್ರಶ್ನಿಸಿದರು?
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಕಟ್ಟ ಕಡೆಯ ಸಮಾಜದ ಮಕ್ಕಳಿಗೆ ಮಾದಿಗ ನೌಕರರು ಪ್ರತಿ ವರ್ಷವೂ ಪ್ರತಿ ಪುರಸ್ಕರಿಸುವ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಹೆಚ್ಚಿನ ಅಂಕಗಳನ್ನು ಪಡೆಯುವುದರ ಜೊತೆಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಮಕ್ಕಳಿಗೆ ಮುಖ್ಯ.

 

ಅಧಿಕಾರಕ್ಕಾಗಿ ಕೀಳು ರಾಜಕಾರಣ ಮಾಡುವವರು ಇರುವುದು ನನ್ನ ಮನಸ್ಸಿಗೆ ಅತೀವವಾದ ಬೇಸರ ತಂದಿದೆ. ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಕೆಲವರು ನಾನು ಮಾಶಾಲ ಜನಾಂಗಕ್ಕೆ ಸೇರಿದವನು ಎಂದು ಅಪ ಪ್ರಚಾರದಲ್ಲಿ ತೊಡಗಿದರು. ನಿಜವಾಗಿಯೂ ನಾನು ಆದಿ ಕರ್ನಾಟಕ. ಚುನಾವಣೆ ಸಂದರ್ಭದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಕ್ಯಾತೆಗಳನ್ನು ಮಾಡಿದವರೆ ನಿಜವಾಗಿದ ಮಾಶಾಲರಿರಬೇಕು. ಸಚಿವರಾದವರೊಬ್ಬರು ತನ್ನ ಮಗನನ್ನು ಎಂ.ಪಿ.ಯನ್ನಾಗಿ ಮಾಡುವುದಕ್ಕಾಗಿ ನನ್ನ ಜಾತಿಯನ್ನು ಹೊರಗೆಳೆಯುವ ಕುತಂತ್ರ ನಡೆಸಿದರೆಂದು ಭಾವುಕರಾಗಿ ಕಣ್ಣೀರು ಹಾಕಿದರು.

 

ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ಮಾದಿಗ ನೌಕರರ ಸಂಘದ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಖಜಾಂಚಿ ಬಿ.ರುದ್ರಮುನಿ, ಉಪಾಧ್ಯಕ್ಷರುಗಳಾದ ಜೆ.ಸಿದ್ದಲಿಂಗಮ್ಮ, ಆರ್.ಜಿ.ನಾಗರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರೇಮನಾಥ್ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now