ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಹಠಾತ್ ನಿಧನಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಇದೀಗ ಸ್ಪಷ್ಟನೆ ಸಿಕ್ಕಿದೆ. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಅವರ ಆರೋಗ್ಯ ಸ್ಥಿತಿ ಹಾಗೂ ಸಾವಿನ ಕಾರಣದ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.ಆಸ್ಪತ್ರೆಯ ಮಾಹಿತಿ ಪ್ರಕಾರ, ಜುಲೈ 11ರಂದು ಮಧ್ಯಾಹ್ನ 12.49ಕ್ಕೆ ಎಸ್. ಜಾನಕಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತಂದಾಗಲೇ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು, ವೈದ್ಯರು ತಕ್ಷಣ ತಪಾಸಣೆ ನಡೆಸಿ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿ ಚಿಕಿತ್ಸೆ ಆರಂಭಿಸಿದ್ದರು.
ಮೂಲಗಳ ಪ್ರಕಾರ, ಜಾನಕಿ ಅವರು ಕಾಲಿನ ತೀವ್ರ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಕಾಲಿನ ಗಾಯವು ಗ್ಯಾಂಗ್ರೀನ್ ಆಗಿ ಮಾರ್ಪಟ್ಟಿದ್ದು, ಸೋಂಕು (ಇನ್ಫೆಕ್ಷನ್) ವ್ಯಾಪಕವಾಗಿ ಹರಡಿದ್ದ ಕಾರಣ ತುರ್ತು ಚಿಕಿತ್ಸೆ ನೀಡಲಾಗುತ್ತಿತ್ತು.ಅಪೋಲೋ ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯರ ಬಹುಶಿಸ್ತೀಯ ತಂಡ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದ ವೇಳೆ, ಜಾನಕಿ ಅವರಿಗೆ ಹಠಾತ್ ಹೃದಯ ಸ್ತಂಭನ (Cardiac Arrest) ಸಂಭವಿಸಿತು. ವೈದ್ಯರು ಅವರನ್ನು ಉಳಿಸಲು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7.30ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ತಿಳಿಸಿದೆ.
ಸಾವಿಗೆ ಕಾರಣ ಏನು?
ಆಸ್ಪತ್ರೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಕಾಲಿನಲ್ಲಿದ್ದ ತೀವ್ರ ಸೋಂಕು ದೇಹದ ಇತರೆ ಭಾಗಗಳಿಗೂ ಹರಡಿದ್ದರಿಂದ ಆರೋಗ್ಯದಲ್ಲಿ ಗಂಭೀರ ಏರುಪೇರು ಉಂಟಾಯಿತು. ಇದೇ ವೇಳೆ ಸಂಭವಿಸಿದ ಹಠಾತ್ ಹೃದಯ ಸ್ತಂಭನವೇ ಎಸ್. ಜಾನಕಿ ಅವರ ನಿಧನಕ್ಕೆ ಪ್ರಮುಖ ಕಾರಣವಾಗಿದೆ ಎಂದು ವೈದ್ಯಕೀಯ ಮಂಡಳಿ ಸ್ಪಷ್ಟಪಡಿಸಿದೆ.ಗಾನಕೋಗಿಲೆಯ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕವು ತನ್ನ ಅಪರೂಪದ ಧ್ವನಿಯೊಂದನ್ನು ಕಳೆದುಕೊಂಡಿದ್ದು, ಅವರ ಅಮರ ಗೀತೆಗಳು ಸಂಗೀತಾಸಕ್ತರ ಹೃದಯದಲ್ಲಿ ಎಂದೆಂದಿಗೂ ಜೀವಂತವಾಗಿರಲಿವೆ.







