Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ- 2017ರಲ್ಲಿ ಅಧಿಕೃತ ವಿದಾಯ : ಎಸ್ ಜಾನಕಿ ಜೀವನ ಚರಿತ್ರೆ

---Advertisement---

ಬೆಂಗಳೂರು.ಜುಲೈ.12 : ಭಾರತೀಯ ಚಿತ್ರರಂಗದ ಲೆಜೆಂಡರಿ ಹಿನ್ನೆಲೆ ಗಾಯಕಿ, ‘ಗಾನ ಕೋಗಿಲೆ’, ‘ನೈಟಿಂಗೇಲ್ ಆಫ್ ಸೌತ್ ಇಂಡಿಯಾ’ ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ ಅವರು ಶನಿವಾರ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

ಜಾನಕಮ್ಮನ ಬಾಲ್ಯದ ಪಯಣ

ಎಸ್. ಜಾನಕಿ ಅವರು ಏಪ್ರಿಲ್ 23, 1938 ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲೆ ತಾಲೂಕಿನ ಪಲ್ಲಪಟ್ಲ ಗ್ರಾಮದಲ್ಲಿ ಶ್ರೀರಾಮಮೂರ್ತಿ ಮತ್ತು ಸತ್ಯವತಿ ದಂಪತಿಯ ಮಗಳಾಗಿ ಜನಿಸಿದರು. ಇವರ ತಂದೆ ಶ್ರೀರಾಮಮೂರ್ತಿ ಅವರು ಶಿಕ್ಷಕರಾಗಿ ಹಾಗೂ ಆಯುರ್ವೇದ ವೈದ್ಯರಾಗಿದ್ದರು. ಉದ್ಯೋಗದ ನಿಮಿತ್ತ ಅವರು ತೆಲಂಗಾಣದ ಕರೀಮನಗರ ಜಿಲ್ಲೆಯ ಸಿರಿಸಿಲ್ಲಾಕ್ಕೆ ಸ್ಥಳಾಂತರಗೊಂಡಿದ್ದರಿಂದ, ಜಾನಕಿ ಅವರ ಬಾಲ್ಯ ಮತ್ತು ಬೆಳವಣಿಗೆಯೆಲ್ಲಾ ಸಿರಿಸಿಲ್ಲಾದಲ್ಲೇ ಆಯಿತು.

ಮೂರನೇ ವಯಸ್ಸಿನಿಂದಲೇ ಸಂಗೀತದತ್ತ ಆಕರ್ಷಿತರಾಗಿದ್ದ ಜಾನಕಿ, ಪ್ರಖ್ಯಾತ ನಾದಸ್ವರ ವಿದ್ವಾಂಸರಾದ ಪೈಡಿಸ್ವಾಮಿ ಅವರ ಬಳಿ ಸಂಗೀತ ಕಲಿತರು. ಬಾಲ್ಯದಲ್ಲಿ ಲತಾ ಮಂಗೇಶ್ಕರ್, ಪಿ. ಸುಶೀಲಾ, ಜಿಕ್ಕಿ, ಪಿ. ಲೀಲಾ ಅವರ ಹಾಡುಗಳಿಂದ ಪ್ರೇರಿತರಾಗಿದ್ದ ಇವರು, ತಮ್ಮ 19ನೇ ವಯಸ್ಸಿನಲ್ಲಿ ಸೋದರಮಾವನ ಸಲಹೆಯ ಮೇರೆಗೆ ಚೆನ್ನೈನ ಪ್ರಸಿದ್ಧ ಎವಿಎಂ (AVM) ಸ್ಟುಡಿಯೋ ಪ್ರವೇಶಿಸಿದರು.

6 ದಶಕಗಳ ಭವ್ಯ ಸಂಗೀತ ಪಯಣ
1957 ರಲ್ಲಿ ತಮಿಳಿನ ‘ವಿಧಿಯಿನ್ ವಿಲಯಾಟ್ಟು’ ಸಿನಿಮಾ ಮೂಲಕ ತಮ್ಮ ಗಾಯನ ವೃತ್ತಿ ಆರಂಭಿಸಿದ ಜಾನಕಿ, ತೆಲುಗಿನ ‘ಎಮ್ಎಲ್ಎ’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಸುಮಾರು 60 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವುಗಳಲ್ಲಿ ಅವರು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ ಹಾಡುಗಳೇ ಅತ್ಯಂತ ಹೆಚ್ಚು ಎಂಬುದು ವಿಶೇಷ.

ಕನ್ನಡದ ವರನಟ ಡಾ. ರಾಜ್ಕುಮಾರ್, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ.ಜೆ. ಜೇಸುದಾಸ್, ಇಳಯರಾಜಾ ಸೇರಿದಂತೆ ಭಾರತದ ದಿಗ್ಗಜ ಗಾಯಕರೊಂದಿಗೆ ಅವರು ನೂರಾರು ಮಧುರ ಗೀತೆಗಳನ್ನು ಹಾಡಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ, ಸುಮಾರು ಐದಾರು ತಲೆಮಾರಿನ ನಾಯಕಿಯರಿಗೆ ಜಾನಕಿ ಅವರ ಧ್ವನಿ ಆಸರೆಯಾಗಿತ್ತು. ವಯಸ್ಸಾದರೂ ಧ್ವನಿಯ ಮಾಧುರ್ಯ ಕುಗ್ಗದಂತೆ ಕಾಯ್ದುಕೊಂಡಿದ್ದು ಅವರ ಹೆಗ್ಗಳಿಕೆ.

ಬಹುಮುಖ ಪ್ರತಿಭೆ ಮತ್ತು ವೈವಿಧ್ಯತೆ:

ಜಾನಕಿ ಅವರು ಕೇವಲ ಗಾಯಕಿ ಮಾತ್ರವಲ್ಲದೆ, ಗೀತರಚನೆಗಾರ್ತಿ ಹಾಗೂ ಕರ್ನಾಟಕ ಸಂಗೀತ ವಿದ್ವಾಂಸರಿಯೂ ಆಗಿದ್ದರು. ‘ಮೌನ ಪೋರಾಟಂ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಭಾನುಮತಿ ಮತ್ತು ಲೀಲಾ ಅವರ ನಂತರ ದಕ್ಷಿಣ ಭಾರತದ ‘ಮೂರನೇ ಮಹಿಳಾ ಸಂಗೀತ ನಿರ್ದೇಶಕಿ’ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ಹಾಡುಗಳಲ್ಲಿ ಮಿಮಿಕ್ರಿ ಧ್ವನಿಯನ್ನು ಬಳಸಿ (ಮಗುವಿನ ಧ್ವನಿ, ವೃದ್ಧೆಯ ಧ್ವನಿ) ಹಾಡುವುದರಲ್ಲಿ ಅವರು ಸಿದ್ದಹಸ್ತರಾಗಿದ್ದರು. ಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಪರಮ ಭಕ್ತೆಯಾಗಿದ್ದ ಜಾನಕಿ, ಮೀರಾಬಾಯಿ ಮೇಲಿನ ಭಕ್ತಿಗೀತೆಗಳ ಕ್ಯಾಸೆಟ್ಗಳನ್ನು ಬಿಡುಗಡೆ ಮಾಡಿದ್ದರು.

ಪ್ರಶಸ್ತಿ ಮತ್ತು ಪುರಸ್ಕಾರಗಳು
ರಾಷ್ಟ್ರ ಪ್ರಶಸ್ತಿಗಳು: ಅತ್ಯುತ್ತಮ ಗಾಯಕಿ ವಿಭಾಗದಲ್ಲಿ 4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ.

ರಾಜ್ಯ ಪ್ರಶಸ್ತಿಗಳು: ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 31 ಬಾರಿ ಪ್ರಶಸ್ತಿಗಳು (ಇದರಲ್ಲಿ 12 ಬಾರಿ ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ ಸೇರಿದೆ).

ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ತೇಜಸ್ಸು.

ಕಲೈಮಾಮಣಿ: ತಮಿಳುನಾಡು ಸರ್ಕಾರದಿಂದ ‘ಕಲೈಮಾಮಣಿ’ ಪುರಸ್ಕಾರ.

ಪದ್ಮಭೂಷಣ ತಿರಸ್ಕಾರ: ದಕ್ಷಿಣ ಭಾರತದ ಕಲಾವಿದರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಮನ್ನಣೆ ಮತ್ತು ಗೌರವ ಸಿಗುತ್ತಿಲ್ಲ ಎಂದು ಪ್ರತಿಭಟಿಸಿ, 2013 ರಲ್ಲಿ ತಮಗೆ ಘೋಷಿಸಲಾಗಿದ್ದ ‘ಪದ್ಮಭೂಷಣ’ ಪ್ರಶಸ್ತಿಯನ್ನು ಜಾನಕಿ ಅವರು ಧೀಮಂತಿಕೆಯಿಂದ ತಿರಸ್ಕರಿಸಿದ್ದರು.

ವೈಯಕ್ತಿಕ ಜೀವನ
ಎಸ್. ಜಾನಕಿ ಅವರು ವಿ. ರಾಮ್ಪ್ರಸಾದ್ ಅವರನ್ನು ವಿವಾಹವಾಗಿ ಚೆನ್ನೈನಲ್ಲಿ ನೆಲೆಸಿದ್ದರು. ರಾಮ್ಪ್ರಸಾದ್ ಅವರು 1990 ರಲ್ಲೇ ನಿಧನರಾಗಿದ್ದರು. ಸೆಪ್ಟೆಂಬರ್ 2017 ರಲ್ಲಿ ಜಾನಕಿ ಅವರು ಇನ್ಮುಂದೆ ತಾವೂ ಹಾಡುವುದಿಲ್ಲ ಎಂದು ಗಾಯನ ವೃತ್ತಿಗೆ ನಿವೃತ್ತಿ ಘೋಷಿಸಿದ್ದರು. ಇಂದು ಅವರು ದೈಹಿಕವಾಗಿ ನಮ್ಮನ್ನಗಲಿದ್ದರೂ, ಅವರು ಹಾಡಿಹೋದ ಸಾವಿರಾರು ಮಧುರ ಗೀತೆಗಳ ಮೂಲಕ ಭಾರತೀಯರ ಹೃದಯದಲ್ಲಿ ಅಮರರಾಗಿರುತ್ತಾರೆ. ಜಾನಕಮ್ಮನ ನಿಧನಕ್ಕೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.

Join WhatsApp

Join Now

Join Telegram

Join Now