ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವರ್ಷ ಮಳೆಯಾಗದಿರಲು ಮತ್ತು ತೀವ್ರ ಕೊರತೆಯಾಗಲು ಭೌಗೋಳಿಕ ಲಕ್ಷಣಗಳು, ಹವಾಮಾನ ವೈಪರೀತ್ಯ ಹಾಗೂ ಮುಂಗಾರು ಮಾರುತಗಳ ದಿಕ್ಕು ಮುಖ್ಯ ಕಾರಣಗಳಾಗಿವೆ.
ಪ್ರಸ್ತುತ ಹವಾಮಾನ ವರದಿಯ ಅಂಕಿ-ಅಂಶಗಳ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆ ಕೊರತೆ ದಾಖಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮುಂಗಾರು ಮಳೆಯ ಏರಿಳಿತ, ಬಲವಾದ ಮಾರುತಗಳು, ಸ್ಥಳೀಯ ಭೌಗೋಳಿಕ ಲಕ್ಷಣಗಳು ಹಾಗೂ ಸಮುದ್ರ ಮಟ್ಟದ ಉಷ್ಣತೆಯ ಏರುಪೇರುಗಳು ಮಾರುತಗಳ ದಿಕ್ಕನ್ನು ಬದಲಾಯಿಸಿ ಮಳೆ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಡಿಮೆ ಮಳೆ ಬೀಳಲು ಪ್ರಮುಖವಾಗಿ ಪಶ್ಚಿಮ ಘಟ್ಟಗಳು ಮಳೆ ಮೋಡಗಳನ್ನು ತಡೆಯುತ್ತಿರುವುದೇ ಕಾರಣವಾಗಿದ್ದು, ಇದರಿಂದಾಗಿ ಜಿಲ್ಲೆಯು ಪೂರ್ತಿಯಾಗಿ ಮಳೆ ನೆರಳಿನ ಪ್ರದೇಶವಾಗಿ ಮಾರ್ಪಡುತ್ತಿದೆ. ಪಶ್ಚಿಮ ಘಟ್ಟದ ಮಲೆನಾಡು ಪ್ರದೇಶಗಳಿಗೆ ಬರುವ ಮಾರುತಗಳು ಆ ಭಾಗದಲ್ಲೇ ಅತಿ ಹೆಚ್ಚು ಮಳೆಯನ್ನು ಸುರಿಸುತ್ತವೆ. ಆದರೆ, ಅವು ಚಿತ್ರದುರ್ಗದಂತಹ ಒಳನಾಡಿಗೆ ಪ್ರವೇಶಿಸುವಷ್ಟರಲ್ಲಿ ಮೋಡಗಳು ತಮ್ಮ ತೇವಾಂಶವನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತವೆ. ಇದರೊಂದಿಗೆ ನೈರುತ್ಯ ಮುಂಗಾರು ಮಾರುತಗಳು ಅನಿರೀಕ್ಷಿತವಾಗಿ ದುರ್ಬಲಗೊಳ್ಳುವುದು ಅಥವಾ ಅವು ಕೇವಲ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಮಾತ್ರ ಸೀಮಿತವಾಗಿರುವುದು ಈ ಪರಿಸ್ಥಿತಿಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ಇದಲ್ಲದೆ, ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿರುವುದರಿಂದ ವಾತಾವರಣದಲ್ಲಿ ತೇವಾಂಶವು ಕಡಿಮೆಯಾಗಿ, ಮಳೆಯ ಮೋಡಗಳು ಮಳೆ ಸುರಿಸದೆ ಕರಗಿ ಹೋಗುತ್ತಿವೆ. ಭಾರತೀಯ ಹವಾಮಾನ ಇಲಾಖೆಯ ವರದಿಯಂತೆ, ಈ ವರ್ಷ ಮುಂಗಾರು ಆರಂಭದಲ್ಲಿ ರಾಜ್ಯದ ಹಲವೆಡೆ ಮಳೆಯ ಕೊರತೆಯಾಗಿದ್ದು, ಇದರ ನೇರ ಪರಿಣಾಮವಾಗಿ ಚಿತ್ರದುರ್ಗ ಜಿಲ್ಲೆಯೂ ಸಹ ಬಿರು ಬಿಸಿಲು ಮತ್ತು ಅನಾವೃಷ್ಟಿಯ ಕಷ್ಟಕ್ಕೆ ಸಿಲುಕಿದೆ. ಸದ್ಯದ ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಕರ್ನಾಟಕ ರಾಜ್ಯ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸಲು ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕೆಂದು ಸರ್ಕಾರವನ್ನು ಕೋರಿದ್ದಾರೆ.









