ದೆಹಲಿ.ಜುಲೈ.11 : ಗ್ರಾಹಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಕ್ವಿಕ್ ಕಾಮರ್ಸ್ ದೈತ್ಯ ಸ್ವಿಗ್ಗಿ ಇನ್ಸ್ಟಾಮಾರ್ಟ್ ಗೆ ಒಟ್ಟು ಒಂಬತ್ತು ನೋಟಿಸ್ಗಳನ್ನು ಜಾರಿ ಮಾಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೇ ಪ್ಯಾಕ್ ಮಾಡಲಾದ ಆಹಾರ ಉತ್ಪನ್ನಗಳ ಮೇಲೆ ತಪ್ಪುದಾರಿಗೆಳೆಯುವ ಜಾಹೀರಾತು ಮತ್ತು ಲೇಬಲಿಂಗ್ ನಿಯಮಗಳ ಉಲ್ಲಂಘನೆಗಾಗಿ ಹಲವು ಆಹಾರ ಕಂಪನಿಗಳಿಗೆ ಎಫ್ಎಸ್ಎಸ್ಎಐ ನೋಟಿಸ್ ನೀಡಿತ್ತು. ಬ್ರ್ಯಾಂಡ್ಗಳು ತಮ್ಮ ಉತ್ಪನ್ನಗಳನ್ನು ಹೇಗೆ ಮಾರುಕಟ್ಟೆ ಮಾಡುತ್ತವೆ ಎಂಬುದರ ಕುರಿತು ನಿಯಂತ್ರಕ ಮಂಡಳಿ ನಡೆಸುತ್ತಿರುವ ನಿರಂತರ ಕಾರ್ಯಾಚರಣೆಯ ಭಾಗವಾಗಿ ಈಗ ಸ್ವಿಗ್ಗಿ ಇನ್ಸ್ಟಾಮಾರ್ಟ್ ವಿರುದ್ಧ ಈ ಕ್ರಮ ಜರುಗಿಸಲಾಗಿದೆ.
ಗ್ರಾಹಕರು ನೀಡಿದ ದೂರುಗಳೇನು?
ಸ್ವಿಗ್ಗಿ ಇನ್ಸ್ಟಾಮಾರ್ಟ್ ಮೂಲಕ ಅವಧಿ ಮುಗಿದ, ಕೆಟ್ಟ ಹೋದ, ಕೊಳೆತ, ಕಲುಷಿತ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಹಕರು ದೂರು ನೀಡಿದ್ದಾರೆ. ಗ್ರಾಹಕರ ದೂರುಗಳನ್ನು ಪರಿಶೀಲಿಸಿದ ನಿಯಂತ್ರಕ ಮಂಡಳಿಯು ಪ್ರಮುಖ ಲೋಪದೋಷಗಳನ್ನು ಪಟ್ಟಿ ಮಾಡಿದೆ.
ಮೊದಲನೆಯದಾಗಿ, ‘ನಾಯ್ಸ್’ (NOICE) ಬ್ರ್ಯಾಂಡ್ನ ಮೊಟ್ಟೆಗಳನ್ನು ಪ್ರಸ್ತುತ ಇರುವ ಎಫ್ಎಸ್ಎಸ್ಎಐ ಪರವಾನಗಿಯಲ್ಲಿ ಅನುಮೋದಿಸದ ಉತ್ಪನ್ನ ವರ್ಗದ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಮಾನ್ಯತೆ ಪಡೆದ ಪರವಾನಗಿ ಇಲ್ಲದೆ ಈ ಉತ್ಪನ್ನವನ್ನು ಮಾರಾಟ ಮಾಡಬಾರದು ಮತ್ತು ಅಗತ್ಯವಿದ್ದರೆ ಪರವಾನಗಿ ಮಾರ್ಪಾಡಿಗೆ ಅರ್ಜಿ ಸಲ್ಲಿಸಬೇಕು ಎಂದು ಆಹಾರ ಉದ್ಯಮ ನಿರ್ವಾಹಕರಿಗೆ (FBO) ಸೂಚಿಸಲಾಗಿದೆ.
ಎರಡನೆಯದಾಗಿ, ‘ಹೆಲ್ತ್ಇಫೈ 100% ವೇ ಪ್ರೋಟೀನ್ 1 ಕೆಜಿ’ ಮತ್ತು ‘ನಾಯ್ಸ್ ಹೋಂಸ್ಟೈಲ್ ಮದ್ರಾಸ್ ಮಿಕ್ಸ್ಚರ್ ವಿತ್ ಪೀನಟ್ಸ್’ ಉತ್ಪನ್ನಗಳನ್ನು ಅವುಗಳ ಎಕ್ಸ್ಪೈರಿ ದಿನಾಂಕ (ಬಳಕೆಯ ಅವಧಿ) ಮುಗಿದ ನಂತರವೂ ಗ್ರಾಹಕರಿಗೆ ಸರಬರಾಜು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೂರನೆಯದಾಗಿ, ‘ಅಕ್ಷಯಕಲ್ಪ ಆರ್ಗಾನಿಕ್ ಎಗ್’ ಉತ್ಪನ್ನವು ಅವಧಿ ಮುಗಿದು, ಕೊಳೆತು ನಾರುತ್ತಿರುವುದು ಮತ್ತು ಕಲುಷಿತಗೊಂಡಿರುವುದು ಪತ್ತೆಯಾಗಿದೆ. ಇದು ಮಾನವ ಬಳಕೆಗೆ ಸಂಪೂರ್ಣವಾಗಿ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೂ, ಈ ಬಗ್ಗೆ ದೂರು ನೀಡಿದ ನಂತರವೂ ಆಹಾರ ಉದ್ಯಮ ನಿರ್ವಾಹಕರು ಯಾವುದೇ ತಿದ್ದುಪಡಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಎಫ್ಎಸ್ಎಸ್ಎಐ ಅಸಮಾಧಾನ ವ್ಯಕ್ತಪಡಿಸಿದೆ.
ಕೊನೆಯದಾಗಿ, ‘ಕಕ್ಕೆ ದ ಪರಾಠ’ ಉತ್ಪನ್ನವೂ ಸಹ ಹಾಳಾಗಿ, ದುರ್ವಾಸನೆ ಬರುತ್ತಿರುವುದು ಕಂಡುಬಂದಿದೆ. ಈ ಸಮಸ್ಯೆಯನ್ನು ಕಂಪನಿಯ ಗಮನಕ್ಕೆ ತಂದ ಹೊರತಾಗಿಯೂ ಇನ್ಸ್ಟಾಮಾರ್ಟ್ ಕಡೆಯಿಂದ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನಿಯಂತ್ರಕ ಮಂಡಳಿ ತಿಳಿಸಿದೆ.










