ಬೆಂಗಳೂರು: ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಯೋಜನೆಯಡಿ ಬರುವ ಒಟ್ಟು 16,925 ಹುದ್ದೆಗಳನ್ನು 2026-27ನೇ ಸಾಲಿಗೂ ಮುಂದುವರಿಸಲು ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಅನುಮೋದನೆಯಲ್ಲಿ ರಾಜ್ಯ ಕಚೇರಿಯ 76 ಹುದ್ದೆಗಳು ಹಾಗೂ ಜಿಲ್ಲಾ ಕಚೇರಿಗಳ 370 ಹುದ್ದೆಗಳು ಒಳಗೊಂಡಿವೆ. ಇನ್ನುಳಿದಂತೆ ತಾಲೂಕು ಮತ್ತು ವಲಯ ಮಟ್ಟದ ಕಚೇರಿಗಳ 15,105 ಹುದ್ದೆಗಳು, ಡಿಪಿಇಪಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 75 ತಾತ್ಕಾಲಿಕ ಗುತ್ತಿಗೆ ಹುದ್ದೆಗಳು ಹಾಗೂ 1292 ಆಡಳಿತಾತ್ಮಕ ಹುದ್ದೆಗಳ ಅವಧಿಯನ್ನೂ ವಿಸ್ತರಿಸಲಾಗಿದೆ.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು (ಬಿಆರ್ಪಿ), ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಸಕ್ರಿಯ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಮುನ್ನಡೆಸಲಾಗುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹುದ್ದೆಗಳಿಗೂ ವಿಸ್ತರಣೆಯ ಭಾಗ್ಯ ಸಿಕ್ಕಿರುವುದರಿಂದ ಯೋಜನೆಯ ಅನುಷ್ಠಾನವು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗಲು ಹಾದಿ ಸುಗಮವಾಗಿದೆ.









