ಬೆಂಗಳೂರು.ಜುಲೈ.10 : ಬೆಂಗಳೂರು ನಗರವನ್ನು ಸ್ವಚ್ಛ, ಸುರಕ್ಷಿತ ಹಾಗೂ ಪಾದಚಾರಿ ಸ್ನೇಹಿಯನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಹೆಚ್.ಎ.ಎಲ್ ಹಳೇ ವಿಮಾನ ನಿಲ್ದಾಣ ರಸ್ತೆ, ಹೆಚ್.ಎಸ್.ಆರ್ ಲೇಔಟ್, ಜಯನಗರ 4ನೇ ಬ್ಲಾಕ್ ಹಾಗೂ ಅಶೋಕ ಪಿಲ್ಲರ್ ಪ್ರದೇಶಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಮತ್ತು ದುರಸ್ತಿ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬೃಹತ್ ಬೆಂಗಳೂರು ಪ್ರಾಧಿಕಾರವು ಸಾರ್ವಜನಿಕರ ಸುರಕ್ಷತೆಗಾಗಿ ‘ಸುರಕ್ಷಿತ ಪಾದಚಾರಿ ಮಾರ್ಗ’ (Safe Footpath) ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಈ ಯೋಜನೆಯು ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ ನಗರದಾದ್ಯಂತ 430 ಕಿಲೋಮೀಟರ್ಗಿಂತಲೂ ಅಧಿಕ ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದ್ದು, ಸಾರ್ವಜನಿಕರ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಯಾವುದೇ ಮುಲಾಜಿಲ್ಲದೆ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಸ್ವಚ್ಛ, ಸುರಕ್ಷಿತ ಹಾಗೂ ಪಾದಚಾರಿ ಸ್ನೇಹಿ ಬೆಂಗಳೂರು ನಮ್ಮ ಸಂಕಲ್ಪ
ಇಂದು ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ @krishnabgowda ಅವರೊಂದಿಗೆ ಹೆಚ್.ಎ.ಎಲ್ ಹಳೇ ವಿಮಾನ ನಿಲ್ದಾಣ ರಸ್ತೆ, ಹೆಚ್.ಎಸ್.ಆರ್ ಲೇಔಟ್, ಜಯನಗರ 4ನೇ ಬ್ಲಾಕ್ ಹಾಗೂ ಅಶೋಕ ಪಿಲ್ಲರ್ ಪ್ರದೇಶಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಮತ್ತು ದುರಸ್ತಿ… https://t.co/LMHmsjPSp6
— DK Shivakumar (@DKShivakumar) July 10, 2026
ಇದನ್ನು ಓದಿಗಾನ ಕೋಗಿಲೆ ಎಸ್. ಜಾನಕಿ ವಿಧಿವಶ
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆಗೂ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಅವರು, ನೋಂದಾಯಿತ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯಗಳನ್ನು ಗುರುತಿಸಿ ತಳ್ಳುವ ಬಂಡಿಗಳನ್ನು ವಿತರಿಸಲಾಗುವುದು. ಇದರಿಂದ ಅವರ ಜೀವನೋಪಾಯಕ್ಕೂ ಧಕ್ಕೆಯಾಗುವುದಿಲ್ಲ, ಇತ್ತ ಪಾದಚಾರಿಗಳ ಹಕ್ಕನ್ನೂ ರಕ್ಷಿಸಿದಂತಾಗುತ್ತದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ರಸ್ತೆ ದಾಟುವಾಗ ಹಾಗೂ ಪಾದಚಾರಿ ಮಾರ್ಗಗಳಿಲ್ಲದೆ 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುರಕ್ಷಿತ ನಡಿಗೆಗಾಗಿ ಸಾರ್ವಜನಿಕರಿಂದ ನಿರಂತರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಫುಟ್ಪಾತ್ಗಳ ಮೇಲೆ ಅಡ್ಡಾದಿಡ್ಡಿಯಾಗಿ ಬಿಟ್ಟುಹೋಗಿರುವ ಹಳೇ ವಾಹನಗಳನ್ನು ಸಹ ತೆರವುಗೊಳಿಸಲಾಗುವುದು.
ಇಲ್ಲಿಯವರೆಗೆ ಅಂಗಡಿ ಮುಂಗಟ್ಟುಗಳು ರಸ್ತೆ ಆಕ್ರಮಿಸಿಕೊಂಡಿದ್ದ ಸಾವಿರಾರು ಪ್ರಕರಣಗಳು ಸೇರಿದಂತೆ ಒಟ್ಟು 9,878 ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಕೇವಲ ಒತ್ತುವರಿ ತೆರವು ಅಷ್ಟೇ ಅಲ್ಲದೆ, ಹಾಳಾಗಿರುವ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವೂ ಭರದಿಂದ ಸಾಗುತ್ತಿದೆ. ಈ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಕೈಜೋಡಿಸಿರುವ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೆ, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ.









