ದೆಹಲಿ.ಜುಲೈ.10: ಆಲ್ಕೋಹಾಲ್ ಅಂಶವನ್ನು ಹೊಂದಿರುವ ಓರಲ್ ಮಾರಾಟಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜುಲೈ 8, 2026 ರಂದು ಹೊರಡಿಸಿರುವ ಆದೇಶದ ಪ್ರಕಾರ, ಶೇಕಡಾ 12 ಕ್ಕಿಂತ ಹೆಚ್ಚು ಈಥೈಲ್ ಆಲ್ಕೋಹಾಲ್ ಹೊಂದಿರುವ ಮತ್ತು 30 ಮಿಲಿಗಿಂತ ದೊಡ್ಡದಾದ ಬಾಟಲಿಗಳಲ್ಲಿ ಮಾರಾಟವಾಗುವ ಓರಲ್ ಮೆಡಿಸಿನ್ಗಳು ಇನ್ಮುಂದೆ ‘ಓವರ್ ದಿ ಕೌಂಟರ್’ (OTC) ಅಂದರೆ ಪ್ರಿಸ್ಕ್ರಿಪ್ಷನ್ ಇಲ್ಲದೆ ನೇರವಾಗಿ ಮೆಡಿಕಲ್ ಶಾಪ್ಗಳಲ್ಲಿ ಸಿಗುವುದಿಲ್ಲ. ಈ ಹೊಸ ನಿಯಮವು ಜನವರಿ 2027 ರಿಂದ ಜಾರಿಗೆ ಬರಲಿದೆ.
ಬದಲಾಗಿರುವ ಪ್ರಮುಖ ನಿಯಮಗಳೇನು?
ಔಷಧಗಳ (ಹತ್ತನೇ ತಿದ್ದುಪಡಿ) ನಿಯಮಗಳು, 2026’ರ ಅಡಿಯಲ್ಲಿ 1945ರ ಔಷಧ ನಿಯಮಾವಳಿಗಳಿಗೆ ಎರಡು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ:
ಪ್ರಿಸ್ಕ್ರಿಪ್ಷನ್ ಕಡ್ಡಾಯ: ಶೇಕಡಾ 12 ಕ್ಕಿಂತ ಹೆಚ್ಚು ಆಲ್ಕೋಹಾಲ್ ಹೊಂದಿರುವ ಔಷಧಗಳನ್ನು ಇನ್ನು ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಮುಕ್ತವಾಗಿ ಮಾರಾಟ ಮಾಡುವಂತಿಲ್ಲ. ಇವುಗಳನ್ನು ‘ಡ್ರಗ್ಸ್ ರೂಲ್ಸ್, 1945’ ರ ಷೆಡ್ಯೂಲ್ H1 (Schedule H1) ಅಡಿಯಲ್ಲಿ ತರಲಾಗಿದ್ದು, ಇವುಗಳ ಖರೀದಿಗೆ ನೋಂದಾಯಿತ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಕಡ್ಡಾಯವಾಗಿದೆ.
ಕಾಯ್ದೆಯ ಪಾಲನೆ: ಈ ಉತ್ಪನ್ನಗಳು ಇನ್ನು ಮುಂದೆ ‘ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ’ಯ (Drugs and Cosmetics Act) ಎಲ್ಲಾ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಯಾವುದೇ ಒಂದು ಔಷಧಿಯಲ್ಲಿ 12% ಕ್ಕಿಂತ ಹೆಚ್ಚು ಈಥೈಲ್ ಆಲ್ಕೋಹಾಲ್ ಇದ್ದು, ಅದರ ಬಾಟಲಿಯ ಗಾತ್ರ 30 ಮಿಲಿಗಿಂತ ಹೆಚ್ಚಿದ್ದರೆ, ಅದನ್ನು ಗ್ರಾಹಕರು ನೇರವಾಗಿ ಮೆಡಿಕಲ್ ಸ್ಟೋರ್ಗಳಲ್ಲಿ ಖರೀದಿಸಲು ಸಾಧ್ಯವಿಲ್ಲ. ಈ ನಿಯಮಗಳು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ಆರು ತಿಂಗಳ ನಂತರ ಅಂದರೆ ಜನವರಿ 2027 ರಿಂದ ಜಾರಿಗೆ ಬರಲಿವೆ.
ಅಧಿಕೃತ ಪ್ರಕಟಣೆಯಲ್ಲಿ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸದಿದ್ದರೂ, ಆಲ್ಕೋಹಾಲ್ ಆಧಾರಿತ ಔಷಧಗಳ ದುರುಪಯೋಗವನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಶೇಷವಾಗಿ ಕೆಲವು ಕೆಮ್ಮಿನ ಸಿರಪ್ಗಳು (Cough Syrups) ಮತ್ತು ದ್ರವರೂಪದ ಔಷಧಗಳನ್ನು ಚಿಕಿತ್ಸೆಗಾಗಿ ಬಳಸುವ ಬದಲು, ನಶೆಗಾಗಿ (ಮಾದಕ ವಸ್ತುವಿನಂತೆ) ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ದೇಶದ ಅತ್ಯುನ್ನತ ತಾಂತ್ರಿಕ ಸಂಸ್ಥೆಯಾದ ‘ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್’ (DTAB) ಜೊತೆ ಸಮಾಲೋಚನೆ ನಡೆಸಿದ ನಂತರವೇ ಆರೋಗ್ಯ ಸಚಿವಾಲಯವು ಈ ತಿದ್ದುಪಡಿಗಳನ್ನು ಮಾಡಿದೆ. ದೇಶದಲ್ಲಿ ಔಷಧಗಳ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು, ಔಷಧಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಸರ್ಕಾರ ನಿರಂತರವಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರ ಹೊರಬಿದ್ದಿದೆ.










