ಬೆಂಗಳೂರು.ಜುಲೈ.09: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ಶೂ ಮತ್ತು ಸಾಕ್ಸ್ (ಪಾದರಕ್ಷೆ) ವಿತರಣಾ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಈಗಾಗಲೇ ಪೂರೈಕೆದಾರರನ್ನು ಅಂತಿಮಗೊಳಿಸಲಾಗಿದ್ದು, ಸರಬರಾಜು ಕಾರ್ಯವು ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಪೂರ್ವಸಿದ್ಧತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಪೂರೈಕೆಯಾಗಲಿರುವ ಪಾದರಕ್ಷೆಗಳು ಇನ್ನು ಒಂದೆರಡು ದಿನಗಳಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಯನ್ನು ತಲುಪಲಿವೆ. ಅಲ್ಲಿಂದ ಮುಂದಕ್ಕೆ ಯಾವುದೇ ಗೊಂದಲವಿಲ್ಲದೆ ಶಾಲೆಗಳಿಗೆ ತಲುಪಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಿದೆ. ಸಾಮಗ್ರಿಗಳ ಸುರಕ್ಷತೆ ಮತ್ತು ದಾಸ್ತಾನು ನಿರ್ವಹಣೆಗಾಗಿ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲು ಸೂಚಿಸಲಾಗಿದೆ. ಈ ಜಾಗಗಳು ಮಳೆ ನೀರು ಸೋರದಂತೆ, ಗೆದ್ದಲು ಅಥವಾ ಇಲಿಗಳ ಕಾಟವಿಲ್ಲದೆ ಸಂಪೂರ್ಣ ಸ್ವಚ್ಛವಾಗಿರಬೇಕು. ಜೊತೆಗೆ ಈ ಸ್ಥಳದ ವಿವರಗಳನ್ನು ಮುಂಚಿತವಾಗಿಯೇ ಪೂರೈಕೆದಾರರಿಗೆ ತಲುಪಿಸುವ ಜವಾಬ್ದಾರಿಯನ್ನು ಬಿಇಓಗಳಿಗೆ ವಹಿಸಲಾಗಿದೆ.
ಬಂದಿಳಿಯುವ ಪಾದರಕ್ಷೆಗಳನ್ನು ಶಾಲಾವಾರು ಮತ್ತು ವಿದ್ಯಾರ್ಥಿಗಳ ತರಗತಿವಾರು ಅಳತೆಗೆ ತಕ್ಕಂತೆ ವಿಂಗಡಿಸಿ ಪ್ಯಾಕ್ ಮಾಡಲು ಪೂರೈಕೆದಾರರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕಿದೆ. ಶಾಲೆಗಳಿಗೆ ವಿತರಣೆ ಮಾಡುವ ಪ್ರಕ್ರಿಯೆ ಸುಲಭವಾಗಲು ತಾಲ್ಲೂಕು ಮಟ್ಟದಲ್ಲಿ ನಿರ್ದಿಷ್ಟ ವೇಳಾಪಟ್ಟಿ ಮತ್ತು ‘ರೂಟ್ ಮ್ಯಾಪ್’ (ವಿತರಣಾ ಮಾರ್ಗಸೂಚಿ) ಸಿದ್ಧಪಡಿಸಿಕೊಳ್ಳಲು ಇಲಾಖೆ ಆದೇಶಿಸಿದೆ. ಪಾದರಕ್ಷೆಗಳು ಶಾಲೆಗೆ ತಲುಪಿದ ತಕ್ಷಣವೇ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ಮಕ್ಕಳಿಗೆ ವಿತರಿಸಲು ಬಿಇಓಗಳು ತಮ್ಮ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಈ ಇಡೀ ಪ್ರಕ್ರಿಯೆಯನ್ನು ಸುಸೂತ್ರವಾಗಿ ಉಸ್ತುವಾರಿ ಮಾಡಲು ಪ್ರತಿ ಕಚೇರಿಯಲ್ಲೂ ಒಬ್ಬ ನೋಡಲ್ ಅಧಿಕಾರಿಯನ್ನು ಕಡ್ಡಾಯವಾಗಿ ನೇಮಿಸಲಾಗುತ್ತಿದೆ. ಶೂ ಮತ್ತು ಸ್ಯಾಂಡಲ್ಗಳ ಗುಣಮಟ್ಟದ ಮಾನದಂಡಗಳನ್ನು ಈಗಾಗಲೇ ಇಲಾಖೆಯ ವೆಬ್ಸೈಟ್ ಹಾಗೂ ಇ-ಮೇಲ್ ಮೂಲಕ ಕಳುಹಿಸಿಕೊಡಲಾಗಿದೆ. ಒಂದೊಮ್ಮೆ ವಿತರಣೆಯ ನಂತರ ವಿದ್ಯಾರ್ಥಿಗಳಿಗೆ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಅದನ್ನು ತಾಲ್ಲೂಕು ಮಟ್ಟದಲ್ಲಿ ಲಭ್ಯವಿರುವ ಹೆಚ್ಚುವರಿ ದಾಸ್ತಾನಿನ ಮೂಲಕ ತಕ್ಷಣವೇ ಬಗೆಹರಿಸಲು ತಿಳಿಸಲಾಗಿದೆ. ಕಾರ್ಯನಿರ್ವಹಣೆಯಲ್ಲಿ ಯಾವುದೇ ಗಂಭೀರ ಸಮಸ್ಯೆ ಎದುರಾದರೆ, ವಿಳಂಬ ಮಾಡದೆ ಜಿಲ್ಲಾ ಉಪನಿರ್ದೇಶಕರು ಹಾಗೂ ಇಲಾಖೆಯ ನಿರ್ದೇಶಕರ ಗಮನಕ್ಕೆ ತರಲು ಸೂಚಿಸಲಾಗಿದೆ.










