ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಲು ಕೇಂದ್ರ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಮನೆ ಮನೆಗೆ ಭೇಟಿ ನೀಡದೆ ಮತದಾರರ ಪರಿಶೀಲನೆ ನಡೆಸುವುದು ಅಥವಾ ಹೆಸರು ಅಳಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಈ ಹಿಂದೆ ಕೆಲವು ಕಡೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮಸೀದಿ, ದೇವಸ್ಥಾನ, ಸಮುದಾಯ ಭವನ ಹಾಗೂ ಸಾರ್ವಜನಿಕ ಸ್ಥಳಗಳಲ್ಲೇ ಅರ್ಜಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಎಲ್ಲಾ BLOಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶಿಸಿದೆ.
ಹೊಸ ಮಾರ್ಗಸೂಚಿಗಳು
ಪ್ರತಿಯೊಬ್ಬ ಮತದಾರರ ಮನೆಗೆ ಭೇಟಿ ನೀಡುವುದು BLOಗಳಿಗೆ ಕಡ್ಡಾಯ.
ಮನೆಗೆ ಹೋದಾಗ ಮತದಾರರು ಸಿಗದಿದ್ದರೆ ವೀಡಿಯೊ ಹಾಗೂ ಫೋಟೋ ಸಹಿತ ಮಹಜರ್ ದಾಖಲಿಸಬೇಕು.
ಬಾಡಿಗೆದಾರರು ಮನೆ ಬದಲಿಸಿದ್ದರೆ ಅದರ ಮಾಹಿತಿಯನ್ನೂ ದಾಖಲಿಸಬೇಕು.
ಮತದಾರರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ ನಮೂನೆ–6 (Form-6) ನೀಡಿ ಹೊಸ ವಿಳಾಸದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸಬೇಕು.
ಮರಣ ಹೊಂದಿರುವ ಅಥವಾ ದೀರ್ಘಕಾಲದಿಂದ ಅನುಪಸ್ಥಿತರಾಗಿರುವ ಮತದಾರರ ಮಾಹಿತಿ ಸಂಬಂಧಿತ Booth Level Agent (BLA) ಗಮನಕ್ಕೆ ತರಬೇಕು.
ಸಂಗ್ರಹಿಸಿದ ವೀಡಿಯೊ, ಫೋಟೋ ಹಾಗೂ ದಾಖಲೆಗಳನ್ನು ಅಧಿಕೃತ ಆ್ಯಪ್ಗೆ ಅಪ್ಲೋಡ್ ಮಾಡುವುದು ಕಡ್ಡಾಯ.
ಮುಂದಿನ ಮೂರು ದಿನಗಳೊಳಗೆ SIR ಅರ್ಜಿ ವಿತರಣೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಹೆಸರು ಅಳಿಸುವ ಮುನ್ನ ಪಾಲಿಸಬೇಕಾದ ನಿಯಮಗಳು
ಮತದಾರರ ಹೆಸರು ಅಳಿಸುವ ಮೊದಲು ಸಂಬಂಧಿತ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ವಿಶೇಷವಾಗಿ ಕೆಳಗಿನ ಸಂದರ್ಭಗಳಲ್ಲಿ ಈ ನಿಯಮ ಅನ್ವಯವಾಗುತ್ತದೆ:
ಸಾವನ್ನಪ್ಪಿರುವ ಮತದಾರರು
ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿರುವ ಮತದಾರರು
ದೀರ್ಘಕಾಲದಿಂದ ಅನುಪಸ್ಥಿತರಾಗಿರುವ ಮತದಾರರು
ಮತದಾರರ ಪಟ್ಟಿಯಿಂದ ಹೆಸರು ರದ್ದುಪಡಿಸಬೇಕಾದ ಪ್ರಕರಣಗಳು
ಈ ಎಲ್ಲ ಪ್ರಕರಣಗಳನ್ನು ಮೊದಲು BLA ಹಾಗೂ ರಾಜಕೀಯ ಪಕ್ಷಗಳ ಗಮನಕ್ಕೆ ತಂದು, ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಈ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಡೆಪ್ಯುಟಿ ಕಮಿಷನರ್ ಸಂಜಯ್ ಕುಮಾರ್ ಅಧಿಕಾರಿಗಳಿಗೆ ಈ ಕುರಿತು ವಿವರವಾದ ನಿರ್ದೇಶನ ನೀಡಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.










