ಸುದ್ದಿಒನ್, ಚಿತ್ರದುರ್ಗ. ಜುಲೈ. 03: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಚುನಾವಣೆಯು ದಿಕ್ಸೂಚಿಯಾಗಿದೆ ಎಂದು ಕೂನಬೇವು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್. ಹನುಮಂತಪ್ಪ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಶಾಲಾ ಸಂಸತ್ ಚುನಾವಣೆ’ಯ ಕುರಿತು ಮಾತನಾಡಿದರು.
ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆಗಳು ಅತ್ಯಂತ ಮಹತ್ತರ ಪಾತ್ರ ವಹಿಸುತ್ತವೆ. ದೇಶದಲ್ಲಿ ಮತದಾನ ಎಂಬುದು ಬಹಳ ಮುಖ್ಯ. ಎಲ್ಲಾ ಮಕ್ಕಳಿಗೆ ಶಾಲೆಯ ಚುನಾವಣೆಗಳು ಪ್ರಜಾಪ್ರಭುತ್ವದ ಗರಡಿ ಮನೆಯಿದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಲೆಯ ಸಹ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಹಾಗೂ ತಮ್ಮ ಪರಿವಾರದವರು, ಮನೆಯವರನ್ನೆಲ್ಲಾ ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಭಾರತೀಯ ಚುನಾವಣಾ ಆಯೋಗವು ಈಗ ನಡೆಸುತ್ತಿರುವ ವಿಶೇಷ ಮತದಾರರ ಪರಿಷ್ಕರಣೆಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಮನವೊಲಿಸಬೇಕು. ಚುನಾವಣೆಗಳಲ್ಲಿ ಶೇ.100 ರಷ್ಟು ಮತದಾನವಾದರೆ ಉತ್ತಮ ಎಂದು ಆಶಯ ವ್ಯಕ್ತಪಡಿಸಿದರು.
ಶಾಲೆಯ ಹಿರಿಯ ಶಿಕ್ಷಕಿ ಪ್ರಶಾಂತ್ ಕುಮಾರಿ ಅವರು ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಹಾಯಕರಾಗಿ ಶಿಕ್ಷಕರಾದ ರಾಧಾಮಣಿ, ವೀಣಾ ಹಾಗೂ ಎಣಿಕೆ ಅಧಿಕಾರಿಗಳಾಗಿ ಷರೀಪ್, ಮಾರುತಿ ಪ್ರಸಾದ್ ಕಾರ್ಯನಿರ್ವಹಿಸಿದರು. ಶಾಲಾ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹ ಮತ್ತು ಖುಷಿಯಿಂದ ಭಾಗವಹಿಸಿ ತಮ್ಮ ಮತ ಚಲಾಯಿಸಿದರು.
ಚುನಾವಣಾ ಫಲಿತಾಂಶದ ಬಳಿಕ ವಿಜೇತರಾದ ಧನುಷ್ ನಾಯಕ್ ಅವರು ಮುಖ್ಯಮಂತ್ರಿಯಾಗಿ ಹಾಗೂ ಶ್ರೇಯಾ ಅವರು ಗೃಹಮಂತ್ರಿಯಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿ ಪ್ರಮಾಣ ವಚನ ಸ್ವೀಕರಿಸಿದರು.





















