ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 02 : ಕಾಂಗ್ರೆಸ್ ನಾಯಕರುಗಳು ಎಸ್.ಐ.ಆರ್.ಬಗ್ಗೆ ಮತದಾರರಲ್ಲಿ ಗೊಂದಲ ಸೃಷ್ಠಿಸುತ್ತಿದ್ದು, ಚುನಾವಣಾ ಆಯೋಗದ ಮೇಲೆ ಜನ ಇಟ್ಟಿರುವ ವಿಶ್ವಾಸ, ನಂಬಿಕೆಗೆ ಧಕ್ಕೆ ತರುವ ಮೂಲಕ ಬಿ.ಎಲ್.ಓ.ಗಳ ಮೇಲೆ ಅನವಶ್ಯಕ ಒತ್ತಡ ಹೇರಿದರೆ ಸುಮ್ಮನಿರುವುದಿಲ್ಲ. ಪ್ರತಿಕ್ರಿಯೆ ನೀಡಬೇಕಾಗುತ್ತದೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಎಚ್ಚರಿಸಿದರು.
ಭಾರತೀಯ ಜನತಾಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2002 ರಲ್ಲಿ ಮತದಾರರ ಮತಪಟ್ಟಿಯ ವಿಶೇಷ ಪರಿಷ್ಕರಣೆಯಾಗಿತ್ತು. 24 ವರ್ಷಗಳಿಂದಲೂ ಎಸ್.ಐ.ಆರ್.ಆಗಿರಲಿಲ್ಲ. ಕೇಂದ್ರ ಚುನಾವಣಾ ಆಯೋಗ ಜೂ.30 ರಿಂದ ಆರಂಭಿಸಿದೆ. ಅನರ್ಹರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಿ ಅರ್ಹರನ್ನು ಪಟ್ಟಿಯಲ್ಲಿ ಉಳಿಸಿ ಮತಪಟ್ಟಿಯನ್ನು ಶುದ್ದವಾಗಿರಿಸಬೇಕೆಂಬುದು ಇದರ ಉದ್ದೇಶ. ಕಾಂಗ್ರೆಸ್ ಬಣ್ಣ ಕಟ್ಟಿ ಜನತೆಯಲ್ಲಿ ಆತಂಕ ಉಂಟು ಮಾಡಬಾರದೆಂದರು.
ರಾಜ್ಯದಲ್ಲಿ ಮತ ಪಟ್ಟಿ ಪರಿಷ್ಕರಣೆ ನಡೆದಿಲ್ಲದ ಕಾರಣ ಅನೇಕರನ್ನು ಮತ ಪಟ್ಟಿಯಲ್ಲಿ ತೂರಿಸಲಾಗಿದೆ. ಗಡಿ ಭಾಗಗಳಲ್ಲಿ ಅಕ್ಕ ಪಕ್ಕದ ರಾಜ್ಯದವರು ಮತ ಪಟ್ಟಿಯಲ್ಲಿ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಭಾರತೀಯ ಪೌರರಲ್ಲದ ನುಸುಳುಕೋರರು ಮತ ಪಟ್ಟಿಯಲ್ಲಿದ್ದಾರೆನ್ನುವ ಸುಳಿವು ಚುನಾವಣಾ ಆಯೋಗಕ್ಕೆ ಸಿಕ್ಕಿರುವುದರಿಂದ ವಿಶೇಷ ಪರಿಷ್ಕರಣೆಯನ್ನು ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಅರವತ್ತರಿಂದ ಅರವತ್ತೈದು ಲಕ್ಷ ನಕಲಿ ಮತದಾರರನ್ನು ಕೈಬಿಡಲಾಗುತ್ತದೆ. ಯಾರಲ್ಲೂ ಆತಂಕ ಬೇಡ. ಮೃತ ಪಟ್ಟವರು, ನಕಲಿಗಳು, ಪಟ್ಟಿಯಲ್ಲಿ ಹೆಸರಿದೆ. ಪತ್ತೆ ಮಾಡಲು ಆಗುತ್ತಿಲ್ಲ. ಸಂದೇಹವಿರುವವರ ಹೆಸರುಗಳನ್ನು ಮತ ಪಟ್ಟಿಯಿಂದ ತೆಗೆಯಲಾಗುತ್ತದೆ. ನಮ್ಮ ಜಿಲ್ಲೆಯಿಂದ ಸುಮಾರು ಒಂದುವರೆ ಲಕ್ಷ ಮತದಾರರು ಬೇರೆ ಬೇರೆ ಊರುಗಳಿಗೆ ಕೆಲಸ ಹುಡುಕಿಕೊಂಡು ಹೋಗಿರಬಹುದು. ಅಂತಹವರು ತಮ್ಮ ತಮ್ಮ ಊರುಗಳಿಗೆ ಮರಳಿ ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಭಾಗವಹಿಸಿ ಮನೆ ಬಾಗಿಲಿಗೆ ಬರುವ ಬಿಎಲ್ಓ. ಗಳಿಗೆ ಪೂರಕ ಮಾಹಿತಿ ನೀಡಿ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಳ್ಳುವಂತೆ ಕೆ.ಎಸ್.ನವೀನ್ ಮನವಿ ಮಾಡಿದರು.
ಬಿಎಲ್ಓ.ಗಳು ಮೂರು ಮೂರು ಬಾರಿ ಮನೆಗಳಿಗೆ ಹೋದ ಸಂದರ್ಭದಲ್ಲಿ ವಿವರವಾದ ಮಾಹಿತಿಗಳನ್ನು ಪಡೆದು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಕಲಿ ಮತಗಳನ್ನು ಜರಡಿ ಹಿಡಿಯುವ ಕೆಲಸವಾಗಬೇಕು. ಮತ ಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ ಎಸ್.ಐ.ಆರ್.ಆಗುತ್ತಿದೆಯೇ ವಿನಃ ಮತ್ತೆ ತಪ್ಪಾಗಬಾರದು.
ಅನರ್ಹರನ್ನು ತೆಗೆದು ಅರ್ಹರನ್ನು ಉಳಿಸುವ ಪ್ರಯತ್ನವಾಗಬೇಕು. ಕಾಂಗ್ರೆಸ್ನಿಂದ ಜನತೆಗೆ ತಪ್ಪು ಸಂದೇಶಗಳನ್ನು ತಲುಪಿಸುವ ಕೆಲಸವಾಗುತ್ತಿದೆ. ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ತಮ್ಮ ಘನತೆಯನ್ನು ಮರೆತು ಮನ ಬಂದಂತೆ ಮಾತನಾಡುತ್ತಿರುವುದರಲ್ಲಿ ಅರ್ಥವಿಲ್ಲ. ರಾಜಕೀಯ ದುರುದ್ದೇಶವಿದೆ ಎಂದು ಕೆ.ಎಸ್.ನವೀನ್ ಕಾಂಗ್ರೆಸ್ ಮುಖಂಡರುಗಳು ವಿರುದ್ದ ಹರಿಹಾಯ್ದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ನಗರ ಮಂಡಲ ಅಧ್ಯಕ್ಷ ಲೋಕೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗರಾಜ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.






















