ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ಎದುರಾದ ಒಳಸಂಚಿನಂತೆಯೇ, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧವೂ ಪಕ್ಷದೊಳಗೆ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಸ್ವಾಮೀಜಿ ಆರೋಪಿಸಿದರು.ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಪೂರ್ಣಾವಧಿ ಆಡಳಿತ ನಡೆಸಲು ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು. ಪಕ್ಷದೊಳಗೇ ಕೆಲವರು ಅವರ ವಿರುದ್ಧ ಕಾಲೆಳೆಯುವ ಪ್ರಯತ್ನ ನಡೆಸಿದ್ದರು. ಆದರೆ, ಎಲ್ಲ ಸವಾಲುಗಳನ್ನು ಮೀರಿ ತಮ್ಮ ದೃಢ ನಿರ್ಧಾರದಿಂದ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು.
ಈಗ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧವೂ ಇದೇ ರೀತಿಯ ಒಳಸಂಚಿನ ರಾಜಕೀಯ ನಡೆಯುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ವೀರಶೈವ–ಲಿಂಗಾಯತ ಸಮುದಾಯವನ್ನು ಕಡೆಗಣಿಸಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನೀಡಿದರೆ ಪಕ್ಷ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಹಿಂದಿನ ಚುನಾವಣೆಯಲ್ಲಿ ಕಂಡ ಪರಿಣಾಮಗಳೇ ಮತ್ತೆ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.ಬಿಜೆಪಿಯೊಳಗಿನ ವಿವಿಧ ಗುಂಪುಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಜನರಲ್ಲಿ ವಿಶ್ವಾಸ ಮೂಡುತ್ತದೆ. ಆದರೆ, ಒಳಜಗಳ ಮುಂದುವರಿದರೆ ಅದರ ರಾಜಕೀಯ ಲಾಭವನ್ನು ವಿರೋಧ ಪಕ್ಷಗಳು ಪಡೆಯುತ್ತವೆ ಎಂದು ಹೇಳಿದರು.
ಆದ್ದರಿಂದ ಪಕ್ಷದ ರಾಷ್ಟ್ರೀಯ ನಾಯಕರು ಶೀಘ್ರವೇ ಮಧ್ಯಪ್ರವೇಶಿಸಿ ಆಂತರಿಕ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ರಾಜ್ಯದ ಎಲ್ಲ ವರ್ಗದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ರಾಷ್ಟ್ರೀಯ ನಾಯಕತ್ವದ ಮೇಲಿದೆ ಎಂದು ರಂಭಾಪುರಿ ಶ್ರೀಗಳು ಅಭಿಪ್ರಾಯಪಟ್ಟರು.





















