ಸಾಂಪ್ರದಾಯಿಕ ಸಿಗರೇಟ್‌ಗಳಿಗೆ ಹೋಲಿಸಿದರೆ ಇ-ಸಿಗರೇಟ್‌ಗಳು ಸುರಕ್ಷಿತ ಮತ್ತು ಶ್ವಾಸಕೋಶವನ್ನು ರಕ್ಷಿಸಿಕೊಳ್ಳುತ್ತಲೇ ಧೂಮಪಾನ ಬಿಡಲು ಇವು ಸಹಕಾರಿ ಎಂಬ ನಂಬಿಕೆ ದಟ್ಟವಾಗಿದೆ. ಆದರೆ, ಧೂಮಪಾನವನ್ನು ಸಂಪೂರ್ಣವಾಗಿ ತೊರೆಯುವುದಕ್ಕೆ ಹೋಲಿಸಿದರೆ, ಇ-ಸಿಗರೇಟ್‌ಗಳಿಗೆ ಬದಲಾಗುವುದು ದೀರ್ಘಾವಧಿಯಲ್ಲಿ ಅಷ್ಟೇನೂ ಆರೋಗ್ಯಕರವಲ್ಲ ಎಂಬ ಆಘಾತಕಾರಿ ವಿಷಯವನ್ನು ಇತ್ತೀಚಿನ ಸಮಗ್ರ ಅಧ್ಯಯನವೊಂದು ಬಹಿರಂಗಪಡಿಸಿದೆ.
ಸೋಲ್ ನ್ಯಾಷನಲ್ ಯೂನಿವರ್ಸಿಟಿ ಬುಂದಾಂಗ್ ಆಸ್ಪತ್ರೆಯ ಸಂಶೋಧಕರು ಈ ಕುರಿತು ವಿಸ್ತೃತ ಸಂಶೋಧನೆ ನಡೆಸಿದ್ದಾರೆ. ಈ ಹಿಂದೆ ಸಾಂಪ್ರದಾಯಿಕ ಸಿಗರೇಟ್ ಸೇದುತ್ತಿದ್ದ 45 ಲಕ್ಷಕ್ಕೂ ಹೆಚ್ಚು ಕೊರಿಯನ್ ವಯಸ್ಕರ ಆರೋಗ್ಯ ದಾಖಲೆಗಳನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಧೂಮಪಾನವನ್ನು ಬಿಟ್ಟ ನಂತರ ಪ್ರತಿದಿನ ಇ-ಸಿಗರೇಟ್ ಬಳಸಲು ಪ್ರಾರಂಭಿಸಿದವರಲ್ಲಿ, ಧೂಮಪಾನ ಮತ್ತು ಇ-ಸಿಗರೇಟ್ ಎರಡನ್ನೂ ಸಂಪೂರ್ಣವಾಗಿ ನಿಲ್ಲಿಸಿದವರಿಗಿಂತ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಶೇಕಡಾ 56 ರಷ್ಟು ಹೆಚ್ಚಾಗಿದೆ ಮತ್ತು ಆ ಕಾಯಿಲೆಯಿಂದ ಸಾಯುವ ಸಾಧ್ಯತೆ ದುಪ್ಪಟ್ಟಾಗಿದೆ ಎಂದು ಸಂಶೋಧನೆ ಪತ್ತೆಹಚ್ಚಿದೆ.
‘ನೇಚರ್ ಮೆಡಿಸಿನ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ರಾಷ್ಟ್ರವ್ಯಾಪಿ ಅಧ್ಯಯನವು ಕೊರಿಯನ್ ರಾಷ್ಟ್ರೀಯ ಆರೋಗ್ಯ ತಪಾಸಣಾ ಕಾರ್ಯಕ್ರಮದ ದತ್ತಾಂಶವನ್ನು ಬಳಸಿಕೊಂಡು 2023ರ ಡಿಸೆಂಬರ್‌ವರೆಗೆ ಭಾಗವಹಿಸುವವರ ಆರೋಗ್ಯ ಸ್ಥಿತಿಯನ್ನು ಪತ್ತೆಹಚ್ಚಿದೆ. ದೀರ್ಘಾವಧಿಯ ಈ ಅಧ್ಯಯನದಲ್ಲಿ 35,887 ಹೊಸ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಮತ್ತು ಕ್ಯಾನ್ಸರ್‌ಗೆ ಸಂಬಂಧಿಸಿದ 12,807 ಸಾವುಗಳನ್ನು ದಾಖಲಿಸಲಾಗಿದೆ. ಇದು ಧೂಮಪಾನದ ನಂತರ ಇ-ಸಿಗರೇಟ್ ಬಳಕೆಯ ದೀರ್ಘಕಾಲೀನ ಪರಿಣಾಮಗಳ ಕುರಿತು ನಡೆದ ಅತ್ಯಂತ ಸಮಗ್ರ ಅಧ್ಯಯನಗಳಲ್ಲಿ ಒಂದಾಗಿದೆ.

ಈ ಸಂಶೋಧನೆಯು ಭಾಗವಹಿಸುವವರನ್ನು ಸಂಪೂರ್ಣವಾಗಿ ಧೂಮಪಾನ ತ್ಯಜಿಸಿದವರು, ಇ-ಸಿಗರೇಟ್‌ಗೆ ಬದಲಾದವರು ಮತ್ತು ಧೂಮಪಾನವನ್ನು ಮುಂದುವರಿಸಿದವರು ಎಂದು ವರ್ಗೀಕರಿಸಿದೆ. ಎರಡೂ ರೀತಿಯ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿದವರಲ್ಲಿ ಅತ್ಯುತ್ತಮ ಆರೋಗ್ಯ ಫಲಿತಾಂಶಗಳು ಕಂಡುಬಂದಿವೆ. ಸಂಪೂರ್ಣವಾಗಿ ಧೂಮಪಾನ ತ್ಯಜಿಸಿದವರಿಗೆ ಹೋಲಿಸಿದರೆ, ಧೂಮಪಾನ ಮುಂದುವರಿಸಿದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ 1.78 ಪಟ್ಟು ಮತ್ತು ಅದರಿಂದ ಸಾಯುವ ಸಾಧ್ಯತೆ 2.41 ಪಟ್ಟು ಹೆಚ್ಚಾಗಿರುತ್ತದೆ. ಆದರೆ, ಸಿಗರೇಟ್ ಬಿಟ್ಟು ಇ-ಸಿಗರೇಟ್ ಬಳಸುವವರಲ್ಲೂ ಕ್ಯಾನ್ಸರ್ ಅಪಾಯ 1.56 ಪಟ್ಟು ಮತ್ತು ಮರಣ ಪ್ರಮಾಣ 2.00 ಪಟ್ಟು ಹೆಚ್ಚಿರುವುದು ಆತಂಕ ಮೂಡಿಸಿದೆ.
ವಿಶೇಷವಾಗಿ 20 ವರ್ಷಗಳಿಗೂ ಹೆಚ್ಚು ಕಾಲ ಧೂಮಪಾನದ ಇತಿಹಾಸ ಹೊಂದಿರುವ 50 ರಿಂದ 80 ವರ್ಷ ವಯಸ್ಸಿನವರಲ್ಲಿ ಈ ಅಪಾಯ ಮತ್ತಷ್ಟು ತೀವ್ರವಾಗಿದೆ. ಇಂತಹ ಹೆಚ್ಚಿನ ಅಪಾಯದ ಗುಂಪಿನಲ್ಲಿ, ಸಾಂಪ್ರದಾಯಿಕ ಧೂಮಪಾನ ಬಿಟ್ಟು ಇ-ಸಿಗರೇಟ್ ಬಳಸುವವರಲ್ಲಿ ಕ್ಯಾನ್ಸರ್ ಬರುವ ಮತ್ತು ಅದರಿಂದ ಸಾಯುವ ಅಪಾಯವು ಸಂಪೂರ್ಣವಾಗಿ ಧೂಮಪಾನ ತ್ಯಜಿಸಿದವರಿಗಿಂತ ಸುಮಾರು ದುಪ್ಪಟ್ಟಾಗಿದೆ. ವಯಸ್ಸು, ಲಿಂಗ, ಧೂಮಪಾನದ ತೀವ್ರತೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು ಮತ್ತು ದೈಹಿಕ ಚಟುವಟಿಕೆಯಂತಹ ವಿವಿಧ ಅಂಶಗಳನ್ನು ಪರಿಗಣಿಸಿದ ನಂತರವೂ ಇ-ಸಿಗರೇಟ್ ಬಳಕೆಯಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುವುದು ದೃಢಪಟ್ಟಿದೆ.
ಹಾಗೆಂದ ಮಾತ್ರಕ್ಕೆ ಇ-ಸಿಗರೇಟ್ ಸಾಂಪ್ರದಾಯಿಕ ಸಿಗರೇಟ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಈ ಅಧ್ಯಯನ ಹೇಳುತ್ತಿಲ್ಲ. ಏಕೆಂದರೆ ಸಾಮಾನ್ಯ ಸಿಗರೇಟ್ ಸೇದುವವರಲ್ಲೇ ಅತ್ಯಧಿಕ ಅಪಾಯವಿದೆ. ಆದರೆ, ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬೇಕೆಂದರೆ ಇ-ಸಿಗರೇಟ್ ಸೇರಿದಂತೆ ಎಲ್ಲಾ ರೀತಿಯ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸುವುದೇ ಏಕೈಕ ಮಾರ್ಗ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.





















