ಚಿತ್ರದುರ್ಗ.ಜೂನ್.29: ಕಳೆದ ಕೆಲವು ದಿನಗಳಿಂದ ಗೊಡಬನಹಾಳ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನ ನಿದ್ದೆಗೆಡುವಂತೆ ಮಾಡಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಪಂಜರ ಸೇರಿದೆ. ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಈ ಚಿರತೆಯನ್ನು ಅರಣ್ಯ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿಯುವ ಮೂಲಕ ಸ್ಥಳೀಯರ ಆತಂಕಕ್ಕೆ ತೆರೆ ಎಳೆದಿದ್ದಾರೆ.
ಗ್ರಾಮದ ಪ್ರಮುಖ ಭಾಗಗಳಲ್ಲಿ ಓಡಾಡಿಕೊಂಡಿದ್ದ ಈ ಚಿರತೆ, ಸಿಕ್ಕಸಿಕ್ಕಲ್ಲಿ ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆಸಿ ಹೊತ್ತೊಯ್ಯುತ್ತಿತ್ತು. ಇದರಿಂದ ಆಕ್ರೋಶಗೊಂಡಿದ್ದ ರೈತರು ಮತ್ತು ಗ್ರಾಮಸ್ಥರು, ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ತೀವ್ರ ಒತ್ತಾಯ ಹೇರಿದ್ದರು. ನಿರಂತರ ದಾಳಿಗಳಿಂದಾಗಿ ಇಲಾಖೆಯ ಅಧಿಕಾರಿಗಳಿಗೂ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಕೊನೆಗೆ ಅರಣ್ಯಾಧಿಕಾರಿ ಗೋಪ್ಯಾನಾಯ್ಕ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಅರಣ್ಯ ಸಿಬ್ಬಂದಿ, ಚಿರತೆ ಅಡಗಿದ್ದ ಜಾಗವನ್ನು ಗುರುತಿಸಿ ನಿಖರವಾಗಿ ಅರವಳಿಕೆ ಮದ್ದು ನೀಡುವಲ್ಲಿ ಯಶಸ್ವಿಯಾದರು. ಚಿರತೆ ಪ್ರಜ್ಞೆ ತಪ್ಪುತ್ತಿದ್ದಂತೆ ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಈ ರೋಮಾಂಚನಕಾರಿ ಕಾರ್ಯಾಚರಣೆಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಸದ್ಯ ಸೆರೆಸಿಕ್ಕ ಚಿರತೆಯನ್ನು ಚಿತ್ರದುರ್ಗದ ಪ್ರಸಿದ್ಧ ಆಡುಮಲ್ಲೇಶ್ವರ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











