ಆಚಾರ್ಯ ಚಾಣಕ್ಯರು ತಮ್ಮ ಬುದ್ಧಿವಂತಿಕೆ ಮತ್ತು ಕಾರ್ಯತಂತ್ರಗಳಿಂದ ಜಗತ್ಪ್ರಸಿದ್ಧರಾಗಿದ್ದಾರೆ. ಅವರು ಶತಮಾನಗಳ ಹಿಂದೆ ಹೇಳಿದ ಚಾಣಕ್ಯ ನೀತಿಯ ಮಾತುಗಳು ಇಂದಿನ ಆಧುನಿಕ ಯುಗದಲ್ಲೂ ಜನರಿಗೆ ಸರಿಯಾದ ಹಾದಿ ತೋರಿಸುವಲ್ಲಿ ಅಷ್ಟೇ ಪ್ರಸ್ತುತವಾಗಿವೆ. ಚಾಣಕ್ಯ ನೀತಿಯು ಕೇವಲ ವೈಯಕ್ತಿಕ ಜೀವನವನ್ನು ಸುಧಾರಿಸುವುದಲ್ಲದೆ, ಸಾಮಾಜಿಕ ಜೀವನ ಮತ್ತು ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂದು ಮಾರ್ಗದರ್ಶನ ನೀಡುತ್ತದೆ.
ಮಾನವನ ಜೀವನದಲ್ಲಿ ‘ಸಮಯ’ಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಸಮಯದ ಮೌಲ್ಯವನ್ನು ಅರಿತುಕೊಳ್ಳದಿದ್ದರೆ ಯಶಸ್ಸು ಸಿಗುವುದು ಅಸಾಧ್ಯ ಎನ್ನುತ್ತಾರೆ ಚಾಣಕ್ಯರು. ಜೀವನವನ್ನು ಯಶಸ್ವಿ ಮತ್ತು ಸಂತೋಷಮಯವಾಗಿಸಲು ಸಮಯದ ನಿರ್ವಹಣೆ ಕುರಿತು ಅವರು ನೀಡಿರುವ ಪ್ರಮುಖ ಸಲಹೆಗಳು ಇಲ್ಲಿವೆ:
ಕಳೆದ ದಿನಗಳ ಬಗ್ಗೆ ಚಿಂತಿಸಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ, ಕಳೆದು ಹೋದ ಸಮಯದ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳುವುದು ಮೂರ್ಖತನ. ನಾವು ಎಷ್ಟೇ ದುಃಖ ಪಟ್ಟರೂ, ಕಣ್ಣೀರು ಹಾಕಿದರೂ ಹಳೆಯ ದಿನಗಳನ್ನು ಅಥವಾ ನಡೆದ ಘಟನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಗತಕಾಲದ ಬಗ್ಗೆ ಅತಿಯಾಗಿ ಯೋಚಿಸುವುದು ಕೇವಲ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆಯೇ ಹೊರತು ಯಾವುದೇ ಪ್ರಯೋಜನ ನೀಡುವುದಿಲ್ಲ. ಆದ್ದರಿಂದ ಹಳೆಯ ಕಹಿ ನೆನಪುಗಳಿಂದ ಹೊರಬಂದು ಮುನ್ನಡೆಯುವುದು ಬುದ್ಧಿವಂತರ ಲಕ್ಷಣ.
ಭವಿಷ್ಯದ ಅತಿಯಾದ ಆತಂಕ ಬೇಡ
ನಾಳೆ ಏನಾಗುವುದೋ ಎಂಬ ಭವಿಷ್ಯದ ಆತಂಕವೂ ವ್ಯರ್ಥ ಎನ್ನುತ್ತದೆ ಚಾಣಕ್ಯ ನೀತಿ. ಮುಂದೆ ಸಂಭವಿಸಲಿರುವ ಘಟನೆಗಳ ಮೇಲೆ ನಮ್ಮ ಯಾವುದೇ ನಿಯಂತ್ರಣ ಇರುವುದಿಲ್ಲ. ಹಾಗಾಗಿ, ಬಾರದ ನಾಳೆಯ ಬಗ್ಗೆ ಯೋಚಿಸಿ ಇಂದಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬಾರದು. ಭವಿಷ್ಯದ ಅತಿಯಾದ ಚಿಂತೆಯು ನಿಮ್ಮನ್ನು ಖಿನ್ನತೆಗೆ ದೂಡಬಹುದು ಮತ್ತು ಇದು ನೀವು ಪ್ರಸ್ತುತ ಮಾಡುತ್ತಿರುವ ಕೆಲಸದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ವರ್ತಮಾನದಲ್ಲಿ ಬದುಕುವುದೇ ಜಾಣ್ಮೆ
ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಪ್ರಸ್ತುತ ಕ್ಷಣದಲ್ಲಿ ಅಂದರೆ ‘ಇಂದಿನ ದಿನ’ದಲ್ಲಿ ಬದುಕುವುದನ್ನು ಕಲಿಯಬೇಕು. ಹಳೆಯ ನೆನಪುಗಳು ಮತ್ತು ಭವಿಷ್ಯದ ಆತಂಕಗಳನ್ನು ಬದಿಗಿಟ್ಟು, ಇಂದಿನ ದಿನವನ್ನು ಉತ್ತಮಗೊಳಿಸಲು ಶ್ರಮಿಸಬೇಕು. ವರ್ತಮಾನದಲ್ಲಿ ನೀವು ಪಡುವ ಕಷ್ಟ ಮತ್ತು ಕಠಿಣ ಪರಿಶ್ರಮವೇ ನಿಮ್ಮ ಭವಿಷ್ಯದ ಯಶಸ್ಸಿಗೆ ನಾಂದಿ ಹಾಡುತ್ತದೆ. ಆದ್ದರಿಂದ ನಿಮ್ಮ ಇಂದಿನ ದಿನವನ್ನು ಸುಂದರ ಹಾಗೂ ಅರ್ಥಪೂರ್ಣವಾಗಿಸಿಕೊಳ್ಳಲು ಗಮನ ಹರಿಸಿ.
ಭೂತಕಾಲದ ಪಶ್ಚಾತ್ತಾಪ ಹಾಗೂ ಭವಿಷ್ಯದ ಆತಂಕಗಳನ್ನು ಬಿಟ್ಟು, ಯಾರು ವರ್ತಮಾನ ಕಾಲದಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಾರೋ, ಅಂತವರ ಜೀವನವು ಸದಾ ಸುಖಮಯವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯರು ನೆನಪಿಸುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












