ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 22 : ಮನಸ್ಸನ್ನು ಒಂದು ಕಡೆ ನೆಲೆ ನಿಲ್ಲಿಸುವ ಶಕ್ತಿ ಯೋಗಕ್ಕಿದೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿಗಳು ಹೇಳಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನದ ಪ್ರಯುಕ್ತ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆಯಿಂದ ರೋಟರಿ ಬಾಲಭವನದಲಿ ಭಾನುವಾರ ಸಂಗೀತ ಶಿಕ್ಷಕಿ ಎಂ.ಜೆ.ಕೋಕಿಲ ರುದ್ರಮೂರ್ತಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.


ಯೋಗ ಅನ್ನುವುದು ಪ್ರಾಣಾಯಾಮವಿದ್ದಂತೆ. ಪ್ರಾಣವಾಯು ಚೆನ್ನಾಗಿದ್ದರೆ ಎಲ್ಲವೂ ಆರೋಗ್ಯವಾಗಿರುತ್ತದೆ. ಮನಸ್ಸು ಯಾವಾಗಲೂ ಪ್ರಶಾಂತವಾಗಿರಬೇಕಾದರೆ ಸಂಗೀತವನ್ನು ಆಲಿಸಬೇಕು. ಮಾತುಗಳೆ ಹಾಡಿನ ಮೂಲಕ ಭಾವ ತುಂಬಿ ಬಂದಾಗ ಸಂಗೀತವಾಗುತ್ತದೆ. ಸಂಗೀತ ಶಿಕ್ಷಕಿ ಕೋಕಿಲಾ ರುದ್ರಮೂರ್ತಿ ತನ್ನ ಕಂಚಿನ ಕಂಠದ ಮೂಲಕ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರಿಗೆ ನೀಡಿರುವ ಚಿನ್ಮುಲಾದ್ರಿ ಗಾನ ಸಿರಿ ಬಿರುದು ಸಾಧನೆಗೆ ತಕ್ಕ ಪ್ರತಿಫಲ ಎಂದು ಹೇಳಿದರು.
ಸಂಗೀತದಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಯೋಗ, ಸಂಗೀತದಿಂದ ನೆಮ್ಮದಿ ಕಂಡುಕೊಳ್ಳಬಹುದು. ಕೋಕಿಲರವರು ಹೆಸರಿಗೆ ತಕ್ಕಂತೆ ಸಂಗೀತವನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಮನಸ್ಸಿನ ಒತ್ತಡ ನಿವಾರಣೆಯಾಗಬೇಕಾದರೆ ಸಂಗೀತದಿಂದ ಮಾತ್ರ ಸಾಧ್ಯ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾತನಾಡಿ ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿ ಬದುಕುತ್ತಿರುವುದರಿಂದ ಯೋಗ ಮತ್ತು ಸಂಗೀತದ ಕಡೆ ಮನಸ್ಸು ಕೊಡಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರಮೋದಿರವರ ಸಾಮರ್ಥ್ಯದಿಂದ ವಿಶ್ವಸಂಸ್ಥೆಯಲ್ಲಿ ಜೂ.21 ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಲಾಯಿತು. ಯೋಗದಿಂದ ಆತಂಕ ದೂರವಾದರೆ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಮೌಲ್ಯ ಮಾಯವಾಗುತ್ತಿದೆ. ಯೋಗ ಮತ್ತು ಸಂಗೀತ ದೇಹಕ್ಕೆ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್ಕುಮಾರ್ ಮಾತನಾಡಿ ಜಾಗತಿಕ ವಿಶ್ವ ಮಟ್ಟದಲ್ಲಿ ಯೋಗವನ್ನು ಗುರುತಿಸಲು ನರೇಂದ್ರಮೋದಿರವರು ಭಾರತದ ಪ್ರಧಾನಿಯಾಗಿ ಬರಬೇಕಾಯಿತು ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುತ್ತದೆ. ಬದಲಾದ ಜೀವನಶೈಲಿ, ಆಹಾರ ಪದ್ದತಿಯಿಂದ ಪ್ರತಿಯೊಬ್ಬರು ಸಕ್ಕರೆ ಕಾಯಿಲೆ
ರಕ್ತದೊತ್ತಡದಿಂದ ಬಳಲುವಂತಾಗಿದೆ. ಚಿಕ್ಕ ಚಿಕ್ಕ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ರೋಗ ಬಾರದಂತೆ ಜೀವಿಸಬೇಕಾದರೆ ಯೋಗ ಪ್ರಮುಖವಾದುದು. ಜಿಲ್ಲೆಯ ಯುವಕ/ಯುವತಿಯರಿಗೆ ಯೋಗ ಮತ್ತು ಸಂಗೀತದ ಮಹತ್ವವನ್ನು ತಿಳಿಸಬೇಕಿದೆ ಎಂದರು.
ಮೈನಿಂಗ್ ಫಂಡ್ ಮತ್ತು ಆಯುಷ್ಮಾನ್ ಇಲಾಖೆಯ ಹಣವಿದೆ. ಧ್ಯಾನ ಹಾಗೂ ಯೋಗ ಕೇಂದ್ರ ತೆರೆದು ಹಳ್ಳಿ ಹಳ್ಳಿಗಳಲ್ಲಿ ಯೋಗದ ಮಹತ್ವ ತಿಳಿಸಬೇಕಿದೆ. ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿ.ಹೆಚ್.ಮೋಹನ್ಕುಮಾರ್ ಭರವಸೆ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ.ಬಸವರಾಜ್ ಮಾತನಾಡುತ್ತ ಪ್ರಕೃತಿಯ ಏರುಪೇರು, ಆಹಾರ ಪದ್ದತಿಯ ಬದಲಾವಣೆಯಿಂದ ಎಲ್ಲರೂ ಒಂದಲ್ಲ ಒಂದು ರೀತಿಯ ಕಾಯಿಲೆಯಿಂದ ಬಳಲುವಂತಾಗಿದೆ. ಆರೋಗ್ಯಕರ ಬದುಕಿಗೆ ಯೋಗ ಬೇಕು. ಸಾಂಸಾರಿಕ ಬದುಕು, ಒತ್ತಡದ ನಡುವೆ ಯೋಗವನ್ನು ಎಲ್ಲರೂ ಮರೆಯುತ್ತಿದ್ದಾರೆ. ಯೋಗ ಮತ್ತು ಸಂಗೀತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಂತರಾಷ್ಟ್ರೀಯ ಯೋಗ ದಿನವನ್ನು ಘೋಷಿಸಲು 197 ರಾಷ್ಟ್ರಗಳು ಬಹುಮತ ಸೂಚಿಸಿತ್ತು. ವಿಶ್ವ ಯೋಗ ದಿನ ಜೂ.21 ಕ್ಕೆ ಸೀಮಿತವಾಗಬಾರದು. ವರ್ಷದ 365 ದಿನವೂ ಯೋಗ ಚಾಲ್ತಿಯಲ್ಲಿರಬೇಕೆಂದು ತಿಳಿಸಿದರು.

ಯೋಗ ದೇಹಕ್ಕೆ ಆರೋಗ್ಯ, ಸಂಗೀತ ಮನಸ್ಸಗೆ ನೆಮ್ಮದಿ ನೀಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ದೇಹದ ಅಂಗಾಂಗಗಳನ್ನು ಚಲನಶೀಲವಾಗಿಟ್ಟುಕೊಳ್ಳಬೇಕಾದರೆ ಯೋಗಕ್ಕೆ ಮೊರೆ ಹೋಗಲೇಬೇಕು. ಹಿರಿಯರ ಆದರ್ಶ, ಸಾಧನೆಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಹೊಣೆಗಾರಿಕೆ ಶಿಕ್ಷಕರುಗಳ
ಮೇಲಿದೆ. ತ್ಯಾಗ, ಪ್ರೀತಿ, ಬಹುತ್ವದ ಸಂಕೇತ ತಂದೆ ಆಲದ ಮರವಿದ್ದಂತೆ. ಮುಟ್ಟಲು ಆಗಲ್ಲ. ಮಡುಚಲು ಆಲ್ಲ ಎಂದು ವಿಶ್ವ ಅಪ್ಪಂದಿರ ದಿನದ ಮಹತ್ವ ತಿಳಿಸಿದರು.
ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷ ಎಲ್.ಎಸ್.ಚಿನ್ಮಯಾನಂದ ಅಧ್ಯಕ್ಷತೆ ವಹಿಸಿದ್ದರು.
ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷ ತೋಟಪ್ಪ ಉತ್ತಂಗಿ ಇವರುಗಳು ವೇದಿಕೆಯಲ್ಲಿದ್ದರು.
ಸಂಗೀತ ಶಿಕ್ಷಕಿ ಎಂ.ಜೆ.ಕೋಕಿಲ ರುದ್ರಮೂರ್ತಿ ಇವರಿಗೆ ಚಿನ್ಮುಲಾದ್ರಿ ಗಾನ ಸಿರಿ ಬಿರುದು ನೀಡಿ ಸನ್ಮಾನಿಸಲಾಯಿತು.









